ADVERTISEMENT

‘ಅದೃಷ್ಟದ ಮನೆ’ಗೆ ಬನ್ನಿ: ಸಿದ್ದರಾಮಯ್ಯಗೆ ಜಮೀರ್ ಆಹ್ವಾನ!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:30 IST
Last Updated 11 ಅಕ್ಟೋಬರ್ 2021, 19:30 IST
ಸಿದ್ದರಾಮಯ್ಯ ಹಾಗೂ ಜಮೀರ್‌ ಅಹಮ್ಮದ್‌ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ ಹಾಗೂ ಜಮೀರ್‌ ಅಹಮ್ಮದ್‌ (ಸಂಗ್ರಹ ಚಿತ್ರ)   

ಬೆಂಗಳೂರು: ಸದಾಶಿವನಗರದಲ್ಲಿರುವ ತಮ್ಮ ಅತಿಥಿ ಗೃಹವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಕೆಗೆ ಬಿಟ್ಟುಕೊಡಲು ಶಾಸಕ ಜಮೀರ್‌ ಅಹಮ್ಮದ್‌ ಮುಂದಾಗಿದ್ದಾರೆ. ಅದು ‘ಅದೃಷ್ಟದ ಮನೆ’ ಎಂಬ ನಂಬಿಕೆಯ ಮೇಲೆ ಆಹ್ವಾನವನ್ನೂ ನೀಡಿದ್ದಾರೆ.

ಈ ಅತಿಥಿ ಗೃಹವನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಬಳಸುತ್ತಿದ್ದರು. ಜಮೀರ್‌ ಅವರು ಜೆಡಿಎಸ್‌ನಲ್ಲಿದ್ದಾಗ ಆಪ್ತರಾಗಿದ್ದ ಅವರಿಗೆ ತಮ್ಮ ಕಟ್ಟಡವನ್ನು ಬಿಟ್ಟುಕೊಟ್ಟಿದ್ದರು. ಜಮೀರ್‌ ಕಾಂಗ್ರೆಸ್‌ ಸೇರಿದರೂ ಕುಮಾರಸ್ವಾಮಿ ಅತಿಥಿ ಗೃಹದಲ್ಲೇ ತಂಗಿದ್ದರು. ರಾಜಕೀಯ ಭೇಟಿ, ಸಭೆ ಮತ್ತಿತರ ಉದ್ದೇಶಗಳಿಗೆ ಆ ಕಟ್ಟಡ ಬಳಕೆ ಮಾಡುತ್ತಿದ್ದರು.

ಇಬ್ಬರ ನಡುವೆ ವೈಮನಸ್ಸು ಹೆಚ್ಚಿದ ಕಾರಣದಿಂದ ಇತ್ತೀಚೆಗೆ ಕಟ್ಟಡವನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದ ಜಮೀರ್, ಸುಣ್ಣ, ಬಣ್ಣ ಬಳಿಸಿ ದುರಸ್ತಿಯನ್ನೂ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಕ್ಕಾಗಿ ಅತಿಥಿ ಗೃಹವನ್ನು ಬಿಟ್ಟುಕೊಡುವುದಕ್ಕಾಗಿ ನವೀಕರಣ ಮಾಡುತ್ತಿರುವುದಾಗಿ ಜಮೀರ್‌ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ADVERTISEMENT

ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗುವ ಮುನ್ನ ಇದೇ ಅತಿಥಿ ಗೃಹದಲ್ಲಿ ಇದ್ದರು. ಅಲ್ಲಿಂದಲೇ ರಾಜಕೀಯ ಚಟುವಟಿಕೆ ನಡೆಸಿ ಅಧಿಕಾರದ ಗದ್ದುಗೆಗೇರಿದ್ದರು. ಈ ಮನೆಯಲ್ಲಿದ್ದರೆ ಮುಖ್ಯಮಂತ್ರಿಯಾಗುವ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಇದೇ ಅತಿಥಿ ಗೃಹದಲ್ಲಿದ್ದರೆ ಮುಖ್ಯಮಂತ್ರಿಯಾಗಬಹುದೆಂದು ಸಿದ್ದರಾಮಯ್ಯ ಅವರ ಮನವೊಲಿಸಿರುವ ಜಮೀರ್‌, ಮನೆಯನ್ನು ಬಳಸಿಕೊಳ್ಳಿ ಎಂದುಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಅದೃಷ್ಟದ ಮನೆ’ಯಲ್ಲಿದ್ದುಕೊಂಡೇ ಮುಖ್ಯಮಂತ್ರಿಯಾಗಲು ಬಯಸಿರುವ ಕುಮಾರಸ್ವಾಮಿ ಅವರು ಅತಿಥಿ ಗೃಹವನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಬಯಸಿದ್ದರು. ಖರೀದಿ ಮಾಡುವ ಪ್ರಸ್ತಾವವನ್ನೂ ಮುಂದಿಟ್ಟಿದ್ದರು. ಆದರೆ, ಜಮೀರ್‌ ಅದನ್ನು ತಿರಸ್ಕರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.