ADVERTISEMENT

ಪ್ರಾಂಶುಪಾಲರಿಗೆ ‘ಜಿಲ್ಲಾ ಅಧಿಕಾರಿ’ ಹುದ್ದೆ: ಪರಿಷತ್‌ನಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 13:49 IST
Last Updated 19 ಡಿಸೆಂಬರ್ 2024, 13:49 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧ</p></div>

ಬೆಳಗಾವಿಯ ಸುವರ್ಣ ವಿಧಾನಸೌಧ

   

ಸುವರ್ಣ ವಿಧಾನಸೌಧ (ಬೆಳಗಾವಿ): ಅಲ್ಪಸಂಖ್ಯಾತರ ನಿರ್ದೇಶನಾಲಯವು ತನ್ನ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರನ್ನು ಆಡಳಿತಾತ್ಮಕ ಹುದ್ದೆಗಳಿಗೆ ನೇಮಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿರುವ ವಿಷಯವನ್ನು ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿಯ ಹೇಮಲತಾ ನಾಯಕ ಅವರು ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

‘ಪ್ರಾಂಶುಪಾಲರಿಗೆ ‘ಜಿಲ್ಲಾ ಅಧಿಕಾರಿ’ ಹುದ್ದೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ‘ಜಿಲ್ಲಾ ಅಧಿಕಾರಿ ಹುದ್ದೆಗೆ ನೇರವಾಗಿ ಆಯ್ಕೆಗೊಂಡವರನ್ನು ಸ್ಥಳ ನಿರೀಕ್ಷಣೆಯಲ್ಲಿ ಇಟ್ಟು, ಆ ಹುದ್ದೆಯನ್ನು ಪ್ರಾಂಶುಪಾಲರಿಗೆ ನೀಡಲಾಗುತ್ತಿದೆ. ಆಡಳಿತಾತ್ಮಕ ಹುದ್ದೆಗಳಿಗೆ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರನ್ನು ನೇಮಿಸುವುದು ಕಾನೂನುಬಾಹಿರ’ ಎಂದರು.

ADVERTISEMENT

‘ಕೆಲವು ಜಿಲ್ಲೆಗಳಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರೇ ಇಲ್ಲ.ಇದು ಶಾಲೆಯ ಶೈಕ್ಷಣಿಕ ಹಿನ್ನಡೆಗೂ ಕಾರಣವಾಗಿದೆ. ಎಸ್‌ಎಸ್‌ಎಲ್‌ಸಿ ಕಳಪೆ ಫಲಿತಾಂಶಕ್ಕೆ ಪ್ರಾಂಶುಪಾಲರನ್ನೇ ಹೊಣೆ ಮಾಡಿ ನಿರ್ದೇಶನಾಲಯ ಇತ್ತೀಚೆಗೆ ನೋಟಿಸ್‌ ಕೂಡಾ ನೀಡಿದೆ. ಹೀಗಿರುವಾಗ ಪ್ರಾಂಶುಪಾಲರನ್ನು ಜಿಲ್ಲಾ ಅಧಿಕಾರಿ ಹುದ್ದೆಗೆ ನೇಮಿಸುವುದು ಎಷ್ಟು ಸರಿ’ ಎಂದೂ ಪ್ರಶ್ನಿಸಿದರು.

ಸಭಾ ನಾಯಕ ಎನ್‌.ಎಸ್‌. ಬೋಸರಾಜು ಅವರು, ಸಚಿವರಿಂದ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.