ADVERTISEMENT

ಶಾಸಕರಿಗೆ ‘ಜೀರೊ ಟ್ರಾಫಿಕ್’ ವ್ಯವಸ್ಥೆ ಮಾಡಿಲ್ಲ ಎಂದ ಸಚಿವ

ಇನ್ನಷ್ಟು ಅಪರಾಧಿಗಳಿಗೆ ‘ಜೀರೊ ಟ್ರಾಫಿಕ್’ ಕೊಡಿ: ಸಭಾಧ್ಯಕ್ಷರ ಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST
   

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿದ್ದ ಶಾಸಕರು, ವಿಧಾನ ಸಭಾಧ್ಯಕ್ಷರನ್ನು ಭೇಟಿ ಮಾಡಲು ಅಲ್ಲಿಂದ ಬಂದ ಸಮಯದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಪೊಲೀಸ್ ಭದ್ರತೆಯಲ್ಲಿ ‘ಜೀರೊ ಟ್ರಾಫಿಕ್’ ಮೂಲಕ ಕರೆತಂದಿದ್ದಕ್ಕೆ ಸೋಮವಾರ ವಿಧಾನಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಗೃಹ ಸಚಿವ ಎಂ.ಬಿ.ಪಾಟೀಲ್, ಮುಂಬೈನಿಂದ ಬಂದ ಶಾಸಕರಿಗೆ‘ಜೀರೊ ಟ್ರಾಫಿಕ್’ ಸಂಚಾರ ವ್ಯವಸ್ಥೆ ಮಾಡಿಲ್ಲ. ರಾಜ್ಯಪಾಲರ ಸೂಚನೆಯಂತೆ ಭದ್ರತೆ ಒದಗಿಸಲಾಗಿದೆ ಎಂದು ವಿವರಣೆ ನೀಡಿದರು. ಇದಕ್ಕೆ ಸಭಾಧ್ಯಕ್ಷರು, ಆಡಳಿತ ಪಕ್ಷದ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

‘ಜೀರೊ ಟ್ರಾಫಿಕ್’ ವ್ಯವಸ್ಥೆ ಮಾಡಿದ್ದನ್ನು ಇಡೀ ಜಗತ್ತೇ ಟಿ.ವಿಗಳಲ್ಲಿ ನೋಡಿದೆ. ಆದರೆ ಸಚಿವರು ಮಾತ್ರ ಸದನದಲ್ಲೇ ಸುಳ್ಳು ಹೇಳುತ್ತಿದ್ದಾರೆ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು. ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಸಹ ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಯಾವ ರಾಷ್ಟ್ರೋದ್ಧಾರ ಮಾಡಲು ಬಂದಿದ್ದಾರೆ ಎಂದು ಜೀರೊ ಟ್ರಾಫಿಕ್ ವ್ಯವಸ್ಥೆ ಮಾಡಿದ್ದೀರಿ. ದೇಶದ ಜನರು ನೋಡಿದ್ದರೂ ಹೀಗೆ ತಪ್ಪು ಉತ್ತರ ಕೊಡುತ್ತಿದ್ದೀರಿ. ಇನ್ನಷ್ಟು ಅಪರಾಧಿಗಳಿಗೂ ಇಂತಹ ಅವಕಾಶ ಕೊಡಿ’ ಎಂದು ಸಭಾಧ್ಯಕ್ಷರು ತರಾಟೆಗೆ ತೆಗೆದುಕೊಂಡರು.

‘ಈ ಉತ್ತರವನ್ನು ವಾಪಸ್ ಪಡೆದು, ಪುನರ್ ಪರಿಶೀಲಿಸಲಿ. ಜನರೇ ನೋಡಿದ್ದರೂ ಸುಳ್ಳು ಹೇಳುವುದು ಸರಿಯಲ್ಲ. ಅಧಿಕಾರಿಗಳಿಂದ ಉತ್ತರ ಪಡೆದುಕೊಂಡಾದರೂ ವಿವರ ಕೊಡಿ. ಜೀರೊ ಟ್ರಾಫಿಕ್ ಮಾಡಿದ ಅಧಿಕಾರಿ ಹೆಸರನ್ನು ಸದನದಲ್ಲಿ ಪ್ರಕಟಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಎಚ್.ಕೆ.ಪಾಟೀಲ್ ಸಲಹೆ ಮಾಡಿದರು.

ಶಾಸಕ ಎ.ಟಿ.ರಾಮಸ್ವಾಮಿ ಈ ವಿಚಾರ ಪ್ರಸ್ತಾಪಿಸಿ ವಿವರಣೆ ಬಯಸಿದರು. ‘ಅರಾಜಕತೆ ಸೃಷ್ಟಿಮಾಡಲು ಹೊರಟವರಿಗೆ ಜೀರೊ ಟ್ರಾಫಿಕ್ ಕಲ್ಪಿಸಿದ್ದೀರಿ. ಅನಾಚಾರ ಮಾಡುವ ಎಲ್ಲರಿಗೂ ಹೀಗೆ ಮಾಡುತ್ತೀರಾ’ ಎಂದರು.

ಕೊನೆಗೆ ಅಧಿಕಾರಿಯಿಂದ ವಿವರಣೆ ಪಡೆದು, ಉತ್ತರ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದರು.

4 ಸಿಗ್ನಲ್‌ಗಳಲ್ಲಿ ನಿಂತಿದ್ದರು: ‘ಅತೃಪ್ತ ಶಾಸಕರಿಗೆ ಜೀರೊ ಟ್ರಾಫಿಕ್‌ ನೀಡಿರಲಿಲ್ಲ. ಅವರು 4 ಸಿಗ್ನಲ್‌ಗಳಲ್ಲಿ ನಿಂತು ಬಂದಿದ್ದಾರೆ. ಪೊಲೀಸ್ ದಾಖಲೆಗಳಲ್ಲಿ ಸಹ ಜೀರೊ ಟ್ರಾಫಿಕ್‌ ನೀಡುವ ಬಗ್ಗೆ ಯಾವುದೇ ಆದೇಶ ನೀಡಿದ್ದು ದಾಖಲಾಗಿಲ್ಲ. ಡಿಜಿಪಿ ಸಹಿತ ರಾಜ್ಯದ ಮೂವರು ಹಿರಿಯ ಅಧಿಕಾರಿಗಳು ನನಗೆ ಇದಕ್ಕೆ ಸಾಕ್ಷ್ಯವಾಗಿ ವಿಡಿಯೊ ನೀಡಿದ್ದಾರೆ. ಮಾಧ್ಯಮಗಳು ಸಹ ಇಂತಹ ವಿಷಯದಲ್ಲಿ ಹಾದಿ ತಪ್ಪಿಸುವ ಕೆಲಸ ಮಾಡಬಾರದು’ ಎಂದು ಸಭಾಧ್ಯಕ್ಷರು ರೂಲಿಂಗ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.