ADVERTISEMENT

ಕೆಎಸ್ಆರ್‌ಪಿ ಮುಖ್ಯಪೇದೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 3:22 IST
Last Updated 27 ಮಾರ್ಚ್ 2020, 3:22 IST
   

ಬೆಂಗಳೂರು: ಕರ್ತವ್ಯನಿರತ ಕೆಎಸ್‌ಆರ್‌ಪಿ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಮೂರನೇ ಬೆಟಾಲಿಯನ್‌ ಹೆಡ್‌ ಕಾನ್‌ಸ್ಟೆಬಲ್‌ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಗುರುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹುಚ್ಚೇಗೌಡ (51) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಮರಣಪತ್ರ ಪತ್ತೆಯಾಗಿಲ್ಲ.

ಮಡಿವಾಳದಲ್ಲಿ ಕೆಎಸ್‌ಆರ್‌ಪಿ ಮೂರನೇ ಬೆಟಾಲಿಯನ್ ಹಿಂಭಾಗದಲ್ಲಿರುವ ಶಸ್ತ್ರಾಸ್ತ್ರ, ಮದ್ದು ಗುಂಡುಗಳ ಉಗ್ರಾಣದ ಕಾವಲು ಕರ್ತವ್ಯಕ್ಕೆ ಹುಚ್ಚೇಗೌಡ ಅವರನ್ನು ಬುಧವಾರ ರಾತ್ರಿ ನಿಯೋಜಿಸಲಾಗಿತ್ತು. ಅವರ ಅಧೀನದಲ್ಲಿ ಕಾನ್‌ಸ್ಟೆಬಲ್‌ಗಳು ಕರ್ತವ್ಯದಲ್ಲಿದ್ದರು.

ADVERTISEMENT

ಹುಚ್ಚೇಗೌಡ ಕಚೇರಿಯ ಕೊಠಡಿಯಲ್ಲಿ ಇದ್ದರು. ಕಾನ್‌ಸ್ಟೆಬಲ್‌ಗಳು ಹೊರಗಡೆ ಸೆಂಟ್ರಿ ಕೆಲಸದಲ್ಲಿದ್ದರು. ನಸುಕಿನ 4.30 ರ ಸುಮಾರಿಗೆ ಹುಚ್ಚೇಗೌಡ ಅವರಿದ್ದ ಕೊಠಡಿಯಿಂದ ಗುಂಡು ಹಾರಿದ ಶಬ್ದ ಕೇಳಿಸಿದೆ. ಪೊಲೀಸರು ನೋಡಿದಾಗ ತಮ್ಮ ಬಳಿಯಿದ್ದ ಎಸ್ಎಲ್ ಆರ್ ಬಂದೂಕಿನಿಂದ ತಲೆಗೆ ಗುಂಡು ಹೊಡೆದುಕೊಂಡಿರುವುದು ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದರು.

ಘಟನಾ ಸ್ಥಳಕ್ಕೆಕೆಎಸ್ಆರ್‌ಪಿಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕೆಎಸ್ಆರ್‌ಪಿವಸತಿಗೃಹದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ಹುಚ್ಚೇಗೌಡ ವಾಸವಿದ್ದರು. ಅವರ ಮಗ ಎಂಟೆಕ್ ಪದವೀಧರ. ಮಗಳು ಎಂಜಿನಿಯರಿಂಗ್ ಓದುತ್ತಿದ್ದಾರೆ ಎಂದು ಅಧಿಕಾರಿಗಳು‌ ಹೇಳಿದರು.

’ಹುಚ್ಚೇಗೌಡ ಅತ್ಯಂತ ಸರಳ ಮತ್ತು ಸ್ನೇಹಪರ ವ್ಯಕ್ತಿತ್ವದವರಾಗಿದ್ದರು. ಬೆಟಾಲಿಯನ್‌ನಲ್ಲೂ ಅವರಿಗೆ ಒಳ್ಳೆಯ ಹೆಸರಿತ್ತು. ಅವರ ಆತ್ಮಹತ್ಯೆ ದಿಗ್ಭ್ರಮೆ ಮೂಡಿಸಿದೆ’ ಎಂದುಕೆಎಸ್ಆರ್‌ಪಿಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.