ADVERTISEMENT

ಹುಬ್ಬಳ್ಳಿ| ಬೇಕಿದೆ ಮೂಲಸೌಕರ್ಯ ಮೀರಿದ ಅಭಿವೃದ್ಧಿ

ಮಾದರಿ ಕ್ಷೇತ್ರವಾಗಿ ನೋಡುವ ನಿರೀಕ್ಷೆಯಲ್ಲಿ ಜನ; ಅಭಿವೃದ್ಧಿಗೆ ಬೇಕಿದೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 22 ಮೇ 2023, 23:36 IST
Last Updated 22 ಮೇ 2023, 23:36 IST
ವ್ಯಾಪಾರಿಗಳಿಗೆ ಮುಕ್ತವಾಗದ ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಮೀನಿನ ಮಾರುಕಟ್ಟೆ
ಪ್ರಜಾವಾಣಿ ಚಿತ್ರ: ಗುರು ಹಬೀಬ
ವ್ಯಾಪಾರಿಗಳಿಗೆ ಮುಕ್ತವಾಗದ ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಮೀನಿನ ಮಾರುಕಟ್ಟೆ ಪ್ರಜಾವಾಣಿ ಚಿತ್ರ: ಗುರು ಹಬೀಬ   

ಓದೇಶ ಸಕಲೇಶಪುರ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಬಹುತೇಕ ಭಾಗವನ್ನು ಹುಬ್ಬಳ್ಳಿ– ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಹೊಂದಿದೆ. ವ್ಯಾಪಾರ ಚಟುವಟಿಕೆಗಳ ಕೇಂದ್ರವೂ ಆಗಿರುವ ಕ್ಷೇತ್ರವು, ಪಕ್ಕದ ಹು–ಧಾ ಸೆಂಟ್ರಲ್ ಕ್ಷೇತ್ರಕ್ಕೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಸ್ವಲ್ಪ ಹಿಂದುಳಿದಿದೆ.

ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದ ಮೂಲಸೌಕರ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಅಭಿವೃದ್ಧಿ ಎಂದರೆ ಕೇವಲ ಮೂಲಸೌಕರ್ಯಕ್ಕಷ್ಟೇ ಸೀಮಿತವಲ್ಲ. ಅದನ್ನೂ ಮೀರಿ ಆಗಬೇಕಾದ ಹಲವು ಅಭಿವೃದ್ಧಿ ಕೆಲಸಗಳಿವೆ. ಆ ಬಗ್ಗೆ ಕ್ಷೇತ್ರದ ಜನರು, ‘ಹ್ಯಾಟ್ರಿಕ್’ ವಿಜಯಿ ಶಾಸಕ ಪ್ರಸಾದ ಅಬ್ಬಯ್ಯ ಅವರ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ADVERTISEMENT

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕ್ಷೇತ್ರದಲ್ಲಿ ನಿರ್ಮಿಸಿರುವ ನೂತನ ಜನತಾ ಬಜಾರ್ ಸಂಕೀರ್ಣದ ಮಳಿಗೆಗಳು ಹಾಗೂ ಮೀನಿನ ಮಾರುಕಟ್ಟೆಗಳು ಉದ್ಘಾಟನೆಯಾದರೂ, ಇಂದಿಗೂ ಮಳಿಗೆಗಳು ಹಂಚಿಕೆಯಾಗಿಲ್ಲ. ಮಂಟೂರ ರಸ್ತೆಯಲ್ಲಿ ಬಡವರಿಗಾಗಿ ನಿರ್ಮಿಸಿರುವ ವಸತಿ ಸಂಕೀರ್ಣ ಉದ್ಘಾಟನೆ ಕಾಣಬೇಕಿದೆ. ದುರ್ಗದ ಬೈಲ್‌ ಮಾರುಕಟ್ಟೆ ಪ್ರದೇಶಕ್ಕೆ ಅಭಿವೃದ್ಧಿ ಭಾಗ್ಯ ಬೇಕಿದೆ.

ಆಗಬೇಕಾದ್ದು ಬಹಳ ಇದೆ: ‘ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದ ರಸ್ತೆ, ಒಳ ಚರಂಡಿ ಸೇರಿದಂತೆ ಮೂಲಸೌಕರ್ಯದ ವಿಷಯದಲ್ಲಿ ಮಹತ್ತರ ಬದಲಾವಣೆಯಾಗಿದೆ. ಆದರೆ, ಮಾದರಿ ಕ್ಷೇತ್ರವಾಗಿಸಲು ಹಲವು ವಿಷಯಗಳ ಬಗ್ಗೆ ಗಮನ ಹರಿಸಬೇಕಿದೆ’ ಎಂದು ಗಣೇಶಪೇಟೆಯ ಸಲೀಂ ಎ. ಮತ್ತು ಶಿವರಾಜ ಹಿರೇಮಠ ಅಭಿಪ್ರಾಯಪಟ್ಟರು.

‘ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಯುವಜನರಿಗೆ ಕೌಶಲಾಭಿವೃದ್ಧಿ ಸೇರಿದಂತೆ ಹಲವು ವಿಷಯಗಳಲ್ಲಿ ಕ್ಷೇತ್ರ ಅಭಿವೃದ್ಧಿಯಾಗಬೇಕಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿ ಮಾಡಬೇಕು. ಅಲ್ಲಲ್ಲಿ ಉದ್ಯಾನಗಳನ್ನು ನಿರ್ಮಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಬೇಕು’ ಎಂದು ಹೇಳಿದರು.

ಆಸ್ಪತ್ರೆಗಳು ಮೇಲ್ದರ್ಜೆಗೇರಲಿ: ‘ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಹೆರಿಗೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದರೆ, ಜನರು ಖಾಸಗಿ ಆಸ್ಪತ್ರೆಗಳಿಗೆ ದುಡ್ಡು ಸುರಿಯುವುದು ತಪ್ಪಲಿದೆ. ಮಾರುಕಟ್ಟೆ ಪ್ರದೇಶಗಳು, ಕೊಳೆಗೇರಿ ಪ್ರದೇಶಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು. ರಸ್ತೆ ಬದಿ ಕಸ ಕಾಣದಂತೆ ಮಾಡಬೇಕು’ ಎಂದು ಹಳೇ ಹುಬ್ಬಳ್ಳಿಯ ವೀರೇಶ ಕುಲಕರ್ಣಿ ಒತ್ತಾಯಿಸಿದರು. 

‘ನಗರದ ಭಾಗವಾದ ಚನ್ನಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಹಳೇ ಪಿ.ಬಿ. ರಸ್ತೆ ಅತ್ಯಂತ ಕಿರಿದಾಗಿದೆ. ಬೆಳಿಗ್ಗೆ–ಸಂಜೆ ಸಂಚಾರ ದಟ್ಟಣೆ ಸಾಮಾನ್ಯ. ರಸ್ತೆಯಲ್ಲೇ ಜನ ವ್ಯಾಪಾರ ಮಾಡುತ್ತಾರೆ. ಪಾರ್ಕಿಂಗ್ ಅಥವಾ ಪಾದಚಾರಿ ಮಾರ್ಗ ಇಲ್ಲದಿರುವುದರಿಂದ, ಆಟೊ ಸೇರಿದಂತೆ ಖಾಸಗಿ ವಾಹನಗಳು ರಸ್ತೆಯಲ್ಲೇ ನಿಲ್ಲುತ್ತವೆ. ಹಾಗಾಗಿ, ಈ ರಸ್ತೆಯನ್ನು ವಿಸ್ತರಣೆ ಮಾಡಬೇಕು’ ಎಂದು ಬಂಕಾಪುರ ಚೌಕದ ಅವಿನಾಶ್ ಆಗ್ರಹಿಸಿದರು.

ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಮೈದಾನ ನಿರ್ವಹಣೆಯ ಕೊರತೆಯಿಂದಾಗಿ ಪಾಳು ಬಿದ್ದಂತಿದೆ ಪ್ರಜಾವಾಣಿ ಚಿತ್ರ: ಗುರು ಹಬೀಬ

ಆಗಬೇಕಾದ್ದೇನು? * ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕು. * ಪ್ರಮುಖ ರಸ್ತೆಗಳಲ್ಲಿ  ಪಾರ್ಕಿಂಗ್ ಸಮಸ್ಯೆ ನಿವಾರಣೆಯಾಗಬೇಕು. * ಪಾದಚಾರಿಗಳ ಮಾರ್ಗಗಳ ನಿರ್ಮಾಣ ಹಾಗೂ ನಿರ್ವಹಣೆ * ಸಾರ್ವಜನಿಕ ಸ್ಥಳ, ಕಚೇರಿಗಳ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. * ಶಾಂತಿಗೆ ಧಕ್ಕೆಯಾಗದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. * ಕಳ್ಳತನ ಸೇರಿದಂತೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಗಸ್ತು ಹೆಚ್ಚಿಸಬೇಕು. * ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಉತ್ತೇಜನ ನೀಡಬೇಕು. * ಯುವಜನರು ಮತ್ತು ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಒದಗಿಸಬೇಕು.

ಸುಸಜ್ಜಿತ ಆಟದ ಮೈದಾನವಿಲ್ಲ ನೆಹರು ಮೈದಾನ ಹುಬ್ಬಳ್ಳಿ ನಗರಕ್ಕೆ ಇರುವ ಏಕೈಕ ಸರ್ಕಾರಿ ಮೈದಾನ. ಅದೂ ಪಕ್ಕದ ಹು–ಧಾ ಸೆಂಟ್ರಲ್ ಕ್ಷೇತ್ರದಲ್ಲಿದೆ. ಪೂರ್ವ ಕ್ಷೇತ್ರದಲ್ಲಿ ಯುವಜನರ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಸುಸಜ್ಜಿತ ಮೈದಾನ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ‘ಇಂಡಿ ಪಂಪ್ ವೃತ್ತದ ಫತೇಶಾವಲಿ ದರ್ಗಾದ ಹಿಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೈದಾನವಿದೆ. ಅಭಿವೃದ್ಧಿ ಕಾಣದ ಮತ್ತು ನಿರ್ವಹಣೆ ಕೊರತೆಯಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿಲ್ಲ. ಆ ಮೈದಾನವನ್ನು ಅಭಿವೃದ್ಧಿಪಡಿಸಿ ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಸರ್ಕಾರಿ ಜಾಗ ಖಾಲಿ ಇದ್ದರೆ ಆಟದ ಮೈದಾನ ಅಭಿವೃದ್ಧಿಪಡಿಸಬೇಕು’ ಎಂದು ಕ್ರೀಡಾಭಿಮಾನಿ ಅಭಿಷೇಕ ಚಲವಾದಿ ಒತ್ತಾಯಿಸಿದರು.

ಮಳೆ ಹಾನಿ ತಡೆಗೆ ಬೇಕು ಶಾಶ್ವತ ಪರಿಹಾರ ಮಳೆಗಾಲ ಬಂದರೆ ಕ್ಷೇತ್ರದ ಹಲವೆಡೆ ಆವಾಂತರಗಳಾಗುವುದು ಸಾಮಾನ್ಯವಾಗಿದೆ. ವರ್ಷಗಳಿಂದ ಇರುವ ಸಮಸ್ಯೆಗೆ ಇಂದಿಗೂ ಪರಿಹಾ ಸಿಕ್ಕಿಲ್ಲ. ‘ಕಸಬಾ ಪೇಟೆ ಮೇದಾರ ಓಣಿ ಸೇರಿದಂತೆ ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುತ್ತದೆ. ಪ್ರತಿ ಸಲವೂ ಜನ ರಾತ್ರೋರಾತ್ರಿ ತಮ್ಮ ಮನೆಗಳನ್ನು ತೊರೆದು ಬೇರೆಡೆ ಆಶ್ರಯ ಪಡೆಯುತ್ತಿದ್ದಾರೆ. ತುಳಜಾ ಭವಾನಿ ದೇವಸ್ಥಾನದ ವೃತ್ತವು ಮಳೆ ಬಂದಾಗ ಹಳ್ಳವಾಗಿ ಬದಲಾಗುತ್ತದೆ. ದೇಗುಲದೊಳಕ್ಕಷ್ಟೇ ಅಲ್ಲದೆ ಅಕ್ಕಪಕ್ಕದ ಅಂಗಡಿಗಳಿಗೂ ನೀರು ನುಗ್ಗುತ್ತದೆ. ಕ್ಷೇತ್ರದ ಹಲವು ತಗ್ಗು ಪ್ರದೇಶಗಳಲ್ಲಿ ಈ ಸಮಸ್ಯೆ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಮೇದಾರ ಓಣಿಯ ರಾಮಪ್ಪ ಬಿ. ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.