ADVERTISEMENT

ಅಂಗವಿಕಲ ಪತಿ ಕೈಬಿಟ್ಟ ಮಹಿಳೆಗೆ ಜೈಲು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಲಂಡನ್ (ಪಿಟಿಐ): ಭಾರತಕ್ಕೆ ಪ್ರವಾಸ ಹೋದ ಸಂದರ್ಭದಲ್ಲಿ 74 ವರ್ಷದ ಅಂಗವಿಕಲ ಪತಿಯನ್ನು ಬೀದಿಪಾಲು ಮಾಡಿ ಬಂದ ಶ್ರೀಮಂತ ಮಹಿಳೆಗೆ ಸ್ವಿಟ್ಜರ್ಲೆಂಡ್ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಆರೋಪಿ ಮಹಿಳೆ 2008ರ ಜನವರಿಯಲ್ಲಿ ಪತಿಯನ್ನು ಕರೆದುಕೊಂಡು ಭಾರತ ಪ್ರವಾಸಕ್ಕೆ ಹೋಗಿದ್ದಳು. ದೆಹಲಿಯಲ್ಲಿ ಪತಿಯನ್ನು ಕುಟುಂಬವೊಂದರ ಸುಪರ್ದಿಗೆ ಒಪ್ಪಿಸಿ ವಾಪಸಾಗಿದ್ದಳು. ಆ ಕುಟುಂಬಕ್ಕೆ ಪ್ರತಿ ತಿಂಗಳು ರೂ 4.80 ಲಕ್ಷ (6,000 ಪೌಂಡ್) ನಿರ್ವಹಣಾ ವೆಚ್ಚ ನೀಡುತ್ತಿದ್ದಳು. ಸರಿಯಾದ ಕಾಳಜಿ ಇಲ್ಲದ ಕಾರಣ ಪತಿ 9 ತಿಂಗಳ ಬಳಿಕ ಮೃತಪಟ್ಟ. ಆತನ ಶವವನ್ನು ದಹನ ಮಾಡಿ ನದಿಯೊಂದಕ್ಕೆ ಎಸೆಯಲಾಯಿತು ಎನ್ನಲಾಗಿದೆ.

ದೆಹಲಿಯಲ್ಲಿ ಪತಿಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಕುಟುಂಬವು ಸ್ವಿಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ವಿಷಯ ಬಯಲಾಯಿತು. `ಪತಿಯ ಆರೋಗ್ಯಕ್ಕೆ ಭಾರತವು ಹೇಳಿ ಮಾಡಿಸಿದ ಸ್ಥಳ ಎಂಬ ಕಾರಣಕ್ಕೆ ನಾನು ಅವರನ್ನು ಅಲ್ಲಿಯೇ ಬಿಟ್ಟು ಬಂದಿದ್ದೆ' ಎಂದು ಮಹಿಳೆ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.