ADVERTISEMENT

ಅಂತ್ಯಸಂಸ್ಕಾರಕ್ಕೆ ಶಿಯಾಗಳ ನಕಾರ

85 ಶವಗಳೊಂದಿಗೆ ಪ್ರತಿಭಟನೆ, ಮನವೊಲಿಕೆಗೆ ಪೊಲೀಸರ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2013, 19:59 IST
Last Updated 18 ಫೆಬ್ರುವರಿ 2013, 19:59 IST
ಕರಾಚಿಯಲ್ಲಿ ಸೋಮವಾರ ಶಿಯಾ ಮುಸ್ಲಿಮರು, ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಶವಗಳ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪ್ರತಿಭಟಿಸಿದರು  	-ಎಎಫ್‌ಪಿ ಚಿತ್ರ
ಕರಾಚಿಯಲ್ಲಿ ಸೋಮವಾರ ಶಿಯಾ ಮುಸ್ಲಿಮರು, ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಶವಗಳ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪ್ರತಿಭಟಿಸಿದರು -ಎಎಫ್‌ಪಿ ಚಿತ್ರ   

ಕರಾಚಿ (ಪಿಟಿಐ): ಅಲ್ಪಸಂಖ್ಯಾತ ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಯುತ್ತಿರುವ ಉಗ್ರರ ದಾಳಿಯನ್ನು ನಿಯಂತ್ರಿಸಲು 48 ಗಂಟೆಯೊಳಗೆ ಸೇನಾ ಕಾರ್ಯಾಚರಣೆ ನಡೆಸಿ ಕ್ವೆಟ್ಟಾ ಪಟ್ಟಣವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದ ಹೊರತು ಬಾಂಬ್ ದಾಳಿಯಲ್ಲಿ ಮೃತಪಟ್ಟ 85ಕ್ಕೂ ಹೆಚ್ಚು ಜನರ ಶವಗಳ ಸಂಸ್ಕಾರ ಮಾಡುವುದಿಲ್ಲ ಎಂದು ಶಿಯಾ ಸಮುದಾಯ ಎಚ್ಚರಿಕೆ ನೀಡಿದೆ. 

ಬಲೂಚಿಸ್ತಾನ ಪ್ರಾಂತ್ಯದ ಹಜಾರಾ ಪಟ್ಟಣದ ಮಾರುಕಟ್ಟೆಯಲ್ಲಿ ಶನಿವಾರ ಸಂಭವಿಸಿದ ಭಾರಿ ಬಾಂಬ್ ದಾಳಿಯಲ್ಲಿ ಮೃತಪಟ್ಟ 85ಕ್ಕೂ ಹೆಚ್ಚು ಜನರ ಶವಗಳೊಂದಿಗೆ  ಶಿಯಾ ಸಮುದಾಯದ ನೂರಾರು ಜನರು ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶಿಯಾ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರತ್ಯೇಕತಾವಾದಿಗಳು ಪದೇ ಪದೇ ದಾಳಿ ನಡೆಸುತ್ತಿರುವ ಎಲ್‌ಇಜೆ ಉಗ್ರ ಸಂಘಟನೆ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಲು 48 ಗಂಟೆಗಳ ಗಡುವು ನೀಡಿದೆ. ಪೊಲೀಸರು ಶವಸಂಸ್ಕಾರ ಮಾಡುವಂತೆ ಶಿಯಾ ಮುಖಂಡರ ಮನವೊಲಿಕೆಯಲ್ಲಿ ತೊಡಗಿದ್ದಾರೆ. ಸೇನಾ ಕಾರ್ಯಾಚರಣೆ ಆರಂಭವಾಗುವರೆಗೂ ಸಂಸ್ಕಾರ ಮಾಡುವುದಿಲ್ಲ ಎಂದು ಶಿಯಾ ಸಮುದಾಯ ಪಟ್ಟು ಹಿಡಿದಿದೆ.

ವೈದ್ಯನ ಹತ್ಯೆ: ಈ ಮಧ್ಯೆ ಲಾಹೋರ್‌ನಲ್ಲಿ ಸೋಮವಾರ ಶಿಯಾ ಸಮುದಾಯಕ್ಕೆ ಸೇರಿದ ಪಾಕಿಸ್ತಾನದ ಖ್ಯಾತ ನೇತ್ರ ತಜ್ಞ ಸೈಯದ್ ಅಲಿ ಹೈದರ್ ಹಾಗೂ ಅವರ 13 ವರ್ಷದ ಪುತ್ರನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ವೈದ್ಯರು ತಮ್ಮ ಪುತ್ರನನ್ನು ಕಾರಿನಲ್ಲಿ ಶಾಲೆಗೆ ಬಿಡಲು ತೆರಳುತ್ತಿದ್ದಾಗ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.