ADVERTISEMENT

ಅಕ್ರಮ:ಬ್ಯಾಂಕ್ ಅಧಿಕಾರಿಗಳ ವಜಾಗೆ ನೌಕರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 17:05 IST
Last Updated 14 ಫೆಬ್ರುವರಿ 2011, 17:05 IST

ಕೈರೊ (ಐಎಎನ್‌ಎಸ್): ಕಳೆದ ಕೆಲ ದಿನಗಳಿಂದ ತೀವ್ರ ಜನಾಂದೋಲನಕ್ಕೆ ಸಾಕ್ಷಿಯಾಗಿದ್ದ ಇಲ್ಲಿನ ತೆಹ್ರೀರ್ ಚೌಕದಲ್ಲಿ ಇದೀಗ ಶಾಂತಿ ನೆಲೆಸಿದೆ. ದೇಶದ ಸಂಸತ್ತನ್ನು ವಿಸರ್ಜಿಸಿ ಹೊಸ ಸಂವಿಧಾನ ರಚನೆಗೆ ಕ್ರಮ ಕೈಗೊಳ್ಳುವ ಭರವಸೆ ನೂತನ ಸೇನಾ ಆಡಳಿತಗಾರರಿಂದ ದೊರೆತ ಬಳಿಕ, ಅಧ್ಯಕ್ಷರ ಪದಚ್ಯುತಿ ಬೇಡಿಕೆಯೊಂದಿಗೆ ಕಳೆದ ಹಲವು ದಿನಗಳಿಂದ ಈ ಚೌಕದಲ್ಲೇ ಬೀಡುಬಿಟ್ಟಿದ್ದ ಸಾವಿರಾರು ಪ್ರತಿಭಟನಾಕಾರರು ಹಿಂದಿರುಗಲಾರಂಭಿಸಿದ್ದಾರೆ.

ಸೇನಾಪಡೆಗಳ ಉನ್ನತ ಘಟಕವಾದ ಸೇನಾ ಮಂಡಳಿಯು, ಇನ್ನು ಆರು ತಿಂಗಳಲ್ಲಿ ಅಥವಾ ಚುನಾವಣೆ ನಡೆಯುವುದರ ಒಳಗೆ ಅಧಿಕಾರ ತ್ಯಜಿಸುವ ಭರವಸೆ ನೀಡಿದೆ. ಇದನ್ನು ಹಲವು ಪ್ರತಿಭಟನಾಕಾರರು ಸ್ವಾಗತಿಸಿರುವುದಾಗಿ ಬಿಬಿಸಿ ತಿಳಿಸಿದೆ.

ಪ್ರತಿಭಟನಾಕಾರರಿಗೆ ದೊರೆತ ಈ ಯಶಸ್ಸಿನಿಂದ ಉತ್ತೇಜಿತರಾದ ಕೆಲ ಬ್ಯಾಂಕ್ ನೌಕರರು, ಅಕ್ರಮಗಳಿಗೆ ಕಾರಣರಾಗಿರುವ ತಮ್ಮ ಮೇಲಧಿಕಾರಿಗಳ ವಜಾಗೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ದೇಶದ ಪ್ರಮುಖ ಬ್ಯಾಂಕುಗಳ ಕಾರ್ಯಾಚರಣೆಗೆ ನೌಕರರು ಅಡ್ಡಿಪಡಿಸಿದ್ದರಿಂದ ಸೋಮವಾರ ಬ್ಯಾಂಕುಗಳಿಗೆ ರಜೆ ಘೋಷಿಸಲಾಯಿತು. ಮಂಗಳವಾರ ಸಹ ಸಾರ್ವಜನಿಕ ರಜಾ ದಿನ ಆಗಿರುವುದರಿಂದ ಬ್ಯಾಂಕುಗಳು ಬುಧವಾರ ಪುನರಾರಂಭವಾಗಲಿವೆ ಎಂದು ‘ಅಲ್ ಜಜೀರ’ ವರದಿ ಮಾಡಿದೆ.

ಸೇನೆಯು ಕಾರ್ಮಿಕ ಸಂಘಟನೆಗಳು ಮತ್ತು ಇತರ ವೃತ್ತಿಪರ ಸಂಘಟನೆಗಳ ಸಭೆಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು ಮತ್ತೊಂದು ಮಾಧ್ಯಮ ವರದಿ ತಿಳಿಸಿದೆ.
‘ಸಂವಿಧಾನವನ್ನು ಅಮಾನತು ಮಾಡಿ ಹೊಸದಾಗಿ ರಚಿಸಲು ಅನುವಾಗುವಂತೆ ಸಮಿತಿಯೊಂದನ್ನು ರಚಿಸಲಾಗುತ್ತದೆ. ಬಳಿಕ ಈ ಬಗ್ಗೆ ಜನಮತ ಸಂಗ್ರಹಿಸಲಾಗುತ್ತದೆ’ ಎಂಬ ಸೇನಾ ಮಂಡಳಿಯ ಆಶ್ವಾಸನೆಯನ್ನು ಸರ್ಕಾರಿ ಸ್ವಾಮ್ಯದ ಟೆಲಿವಿಷನ್‌ನಲ್ಲಿ ಭಾನುವಾರ ಪ್ರಕಟಿಸಲಾಯಿತು.

ಈವರೆಗೆ ಇದ್ದ ದೇಶದ ಸಂವಿಧಾನವು ಹಲವು ಪಕ್ಷಗಳು ಮತ್ತು ಗುಂಪುಗಳು ಚುನಾವಣೆಗೆ ನಿಲ್ಲುವುದನ್ನು ತಡೆಹಿಡಿದಿತ್ತು. ಇದರಿಂದ ಮುಬಾರಕ್ ಅವರಿಗೆ ನಿಷ್ಠರಾಗಿದ್ದ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರೇ ಸಂಸತ್ತಿನ ತುಂಬ ತುಂಬಿಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.