ADVERTISEMENT

ಅಣ್ಣಾ ಬೆಂಬಲಿಗರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ದುಬೈ (ಪಿಟಿಐ): ಅಣ್ಣಾ ಹಜಾರೆ ಅವರ ಸತ್ಯಾಗ್ರಹವನ್ನು ಬೆಂಬಲಿಸಿ ದುಬೈನಲ್ಲಿ ಮೆರವಣಿಗೆ ನಡೆಸಿದ ವೇಳೆ ಬಂಧಿತರಾಗಿದ್ದ ಐವರು ಭಾರತೀಯರಿಗೆ ಭಾನುವಾರ ಜಾಮೀನು ದೊರೆತಿದೆ.

ಸ್ಥಳೀಯ ಅಧಿಕಾರಿಗಳ ಅನುಮತಿ ಇಲ್ಲದೆ ಪ್ರತಿಭಟನಾ ಮೆರವಣಿಗೆ ನಡೆಸಿದ ಆರೋಪ ಎದುರಿಸುತ್ತಿದ್ದ ಇವರನ್ನು ಆಗಸ್ಟ್ 21ರಂದು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆಗಸ್ಟ್ 25ರಂದು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

`ಈಗ ಎಲ್ಲ ಆರೋಪಿಗಳಿಗೂ ಜಾಮೀನು ದೊರೆತಿದೆ. ಆದರೆ ಈದ್ ರಜೆ ಭಾನುವಾರವಷ್ಟೇ ಮುಗಿದಿದ್ದು ಕೋರ್ಟ್‌ನ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಇನ್ನಷ್ಟು ಸಮಯ ಬೇಕು. ಆದ್ದರಿಂದ ಇವರು ಸೆರೆಮನೆಯಿಂದ ಹೊರಬರಲು ಇನ್ನೂ ಒಂಬತ್ತು ದಿನ ಕಾಯಬೇಕಾಗುತ್ತದೆ~ ಎಂದು ಮೂವರು ಆರೋಪಿಗಳ ಪರ ವಕಾಲತ್ತು ವಹಿಸಿರುವ ವಕೀಲ ಟಿ.ಕೆ.ಹಶೀಷ್ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬ ಭಾರತೀಯ ಇಲ್ಲಿನ ಅಲ್ ಮಾಮ್ಝಾರ್ ಬೀಚ್‌ನಲ್ಲಿ ಮೂರು ಕಿ.ಮೀ.ದೂರದವರೆಗೆ ಅಣ್ಣಾ ಹಜಾರೆ ಪರ ಕಾಲ್ನಡಿಗೆಯ ಕಾರ್ಯಕ್ರಮ ಸಂಘಟಿಸಿದ್ದ. ಅದಕ್ಕಾಗಿ ಆತ ಫೇಸ್‌ಬುಕ್ ಮುಖಾಂತರ ಸಾರ್ವಜನಿಕರ ಸಹಕಾರವನ್ನೂ ಕೋರಿದ್ದ. ಇದು ರಾಷ್ಟ್ರೀಯ ಭದ್ರತಾ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಅವನನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.