ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಅಮೆರಿಕದ ರಾಜತಾಂತ್ರಿಕರ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಅಧ್ಯಕ್ಷರ ಹೇಳಿಕೆಗೆ ವಿರುದ್ಧ ಹೇಳಿಕೆ ನೀಡಿದ ಘಟನೆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರ ಖಾತೆಯನ್ನು ಬದಲಾಯಿಸುವ ಬಗೆಗಿನ ವದಂತಿಗಳು ಇಲ್ಲಿ ದಟ್ಟಗೊಂಡಿವೆ.
ಸಭೆ ನಡೆದ ನಾಲ್ಕು ದಿನಗಳ ಬಳಿಕ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ನೀಡಿದ ಹೇಳಿಕೆಯು ರಬ್ಬಾನಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಊಹಾಪೋಹವನ್ನು ಹುಟ್ಟುಹಾಕಿದೆ.
ಲಾಹೋರ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಗಿಲಾನಿ ಅವರು ~ಹೊಸ ತಂಡವು~ ಕಾಶ್ಮೀರದಂತಹ ಬಾಕಿ ವಿಷಯಗಳ ಇತ್ಯರ್ಥ ವಿಚಾರದಲ್ಲಿ ಭಾರತದೊಂದಿಗೆ ಮಾತುಕತೆ ಮುಂದುವರೆಸುವುದು ಎಂಬುದಾಗಿ ಮಂಗಳವಾರ ಹೇಳುವ ಮೂಲಕ ವಿದೇಶಾಂಗ ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಅಚ್ಚರಿಯಲ್ಲಿ ಕೆಡವಿದರು.
ಆದರೆ ವರದಿಗಾರರು ಗಿಲಾನಿ ಹೇಳಿಕೆ ಬಗ್ಗೆ ಹೆಚ್ಚು ಚರ್ಚಿಸಲಿಲ್ಲ. ಗಿಲಾನಿಯವರೂ ~ಹೊಸ ತಂಡ~ ಎಂದರೆ ಏನು ಎಂಬುದಾಗಿ ಹೆಚ್ಚಿನ ವಿವರಣೆ ನೀಡಲಿಲ್ಲ.
ಅಮೆರಿಕದ ರಾಜ್ಯಾಂಗ ಉಪಕಾರ್ಯದರ್ಶಿ ಥಾಮಸ್ ನೈಡ್ಸ್ ನೇತೃತ್ವದ ಅಮೆರಿಕದ ನಿಯೋಗವು ಏಪ್ರಿಲ್ 4ರಂದು ಲಾಹೋರ್ ನಲ್ಲಿ ರಾಜ್ಯಪಾಲರ ಭವನದಲ್ಲಿ ನಡೆದ ಸಭೆಯಲ್ಲಿ ರಬ್ಬಾನಿ ಖಾರ್ ಅವರು ಬಹಿರಂಗವಾಗಿ ಅಧ್ಯಕ್ಷರ ಹೇಳಿಕೆಗೆ ವಿರುದ್ಧ ಹೇಳಿಕೆ ನೀಡಿದಾಗ ಅಚ್ಚರಿಗೊಂಡಿತ್ತು ಎಂದು ರಾಜತಾಂತ್ರಿಕ ಮೂಲಗಳು ಪಿಟಿಐಗೆ ತಿಳಿಸಿವೆ.
ಜರ್ದಾರಿಯವರು ಆಗ ಪಂಜಾಬ್ ಪ್ರಾಂತದ ರಾಜಧಾನಿಯಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಕಾರ್ಯಕರ್ತರ ಜೊತೆ ಚರ್ಚಿಸುವ ಸಲುವಾಗಿ ಆಗಮಿಸಿದ್ದರು. ನೈಡ್ಸ್ ಅವರು ಮೇ ತಿಂಗಳಲ್ಲಿ ಷಿಕಾಗೋದಲ್ಲಿ ನಡೆಯುವ ಆಫ್ಗಾನಿಸ್ತಾನ ಕುರಿತ ಸಮ್ಮೇಳನದಲ್ಲಿ ಪಾಕಿಸ್ತಾನದ ನಿರ್ಣಾಯಕ ಪಾಲ್ಗೊಳ್ಳುವಿಕೆ ವಿಚಾರವನ್ನು ಪ್ರಸ್ತಾಪಸಿದ್ದರು.
ಅಮೆರಿಕ ಔಪಚಾರಿಕ ಆಮಂತ್ರಣ ನೀಡಿದರೆ ಪಾಕಿಸ್ತಾನ ಈ ಬಗ್ಗೆ ಮಾತುಕತೆ ನಡೆಸಬಹುದು ಎಂದು ಅಧ್ಯಕ್ಷರು ಹೇಳಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ರಬ್ಬಾನಿ ~ಸಂಸತ್ತಿನ ಜಂಟಿ ಅಧಿವೇಶನವು ಪಾಕಿಸ್ತಾನ -ಅಮೆರಿಕ ಬಾಂಧವ್ಯಗಳ ಕುರಿತ ಮರುಪರಿಶೀಲನೆಯನ್ನು ಪೂರ್ಣಗೊಳಿಸುವ ವರೆಗೆ ಈ ವಿಷಯವನ್ನು ಪ್ರಸ್ತಾಪಿಸಲಾಗದು~ ಎಂದು ಹೇಳಿದರು ಎಂದು ಮೂಲಗಳು ಹೇಳಿವೆ.
ಷಿಕಾಗೋ ಸಮ್ಮೇಳನ ಕುರಿತ ಯಾವುದೇ ಮಾತುಕತೆಯನ್ನು ಮರುಪರಿಶೀಲನೆ ಬಳಿಕವೇ ಕೈಗೆತ್ತಿಕೊಳ್ಳಲು ಸಾಧ್ಯ ಎಂಬುದಾಗಿ ರಬ್ಬಾನಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷರ ಸಮ್ಮುಖದಲ್ಲಿ ರಬ್ಬಾನಿ ಅವರು ನೀಡಿದ ವಾದ ವೈಖರಿಯ ಹೇಳಿಕೆಯಿಂದ ಅಮೆರಿಕ ನಿಯೋಗ ಅಚ್ಚರಿಗೊಂಡಿತ್ತು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.