ADVERTISEMENT

ಅನಗತ್ಯ ಚುನಾವಣೆ: ಮೇ ಜನಪ್ರಿಯತೆ ಪಣಕ್ಕೆ

ಏಜೆನ್ಸೀಸ್
Published 4 ಜೂನ್ 2017, 19:49 IST
Last Updated 4 ಜೂನ್ 2017, 19:49 IST
ಅನಗತ್ಯ ಚುನಾವಣೆ: ಮೇ ಜನಪ್ರಿಯತೆ ಪಣಕ್ಕೆ
ಅನಗತ್ಯ ಚುನಾವಣೆ: ಮೇ ಜನಪ್ರಿಯತೆ ಪಣಕ್ಕೆ   

ಬ್ರಿಟನ್‌ನಲ್ಲಿ 2020ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಪ್ರಧಾನಿ ತೆರೆಸಾ ಮೇ ಅವರ ಅಧಿಕಾರಾವಧಿ ಅಲ್ಲಿಯವರೆಗೆ ಇತ್ತು. ಆದರೆ ಜನಪ್ರತಿನಿಧಿ ಸಭೆಯಲ್ಲಿ ಮೂರನೇ ಎರಡು ಬಹುಮತ ಪಡೆಯುವುದಕ್ಕಾಗಿ ಮೇ ಅವರು ಅವಧಿಪೂರ್ವ ಚುನಾವಣೆ ಘೋಷಿಸಿದ್ದಾರೆ. ಇದೇ ಗುರುವಾರ ಅಲ್ಲಿ ಚುನಾವಣೆ ನಡೆಯಲಿದೆ.

ಆರಂಭದಲ್ಲಿ ನಡೆದ ಸಮೀಕ್ಷೆಗಳಲ್ಲಿ ಮೇ ಅವರು ಭಾರಿ ಬೆಂಬಲ ಪಡೆದುಕೊಂಡಿದ್ದರು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅದು ಕಡಿಮೆಯಾಗಿದೆ. ಇದು ಬ್ರಿಟನ್‌ ಚುನಾವಣೆಯನ್ನು ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿದೆ.

ಚುನಾವಣೆ ಘೋಷಣೆಗೆ ಕಾರಣಗಳು
* ಐರೋಪ್ಯ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್‌) ಮಾತುಕತೆಯಲ್ಲಿ ತಮ್ಮ ನಿಲುವು ಇನ್ನಷ್ಟು ಗಟ್ಟಿಗೊಳಿಸಲು ಭಾರಿ ಬಹುಮತ ಬೇಕು ಎಂಬುದು ಮೇ ಅವರ ವಾದ

ADVERTISEMENT

* ಬ್ರೆಕ್ಸಿಟ್‌ಗೆ ಅಗತ್ಯವಾದ ಕಾಯ್ದೆ ರೂಪಿಸಲು ಮೇಲ್ಮನೆ (ಹೌಸ್‌ ಆಫ್‌ ಲಾರ್ಡ್ಸ್‌) ಮತ್ತು ವಿರೋಧ ಪಕ್ಷಗಳು ಅಡ್ಡಿ ಪಡಿಸುವ ಆತಂಕ

* ಚುನಾವಣೆಯಲ್ಲಿ ಭಾರಿ ಬಹುಮತ ಪಡೆದರೆ 2015ರಲ್ಲಿ ಡೇವಿಡ್ ಕ್ಯಾಮರೂನ್‌ ಅವರು ನೀಡಿದ ಚುನಾವಣಾ ಭರವಸೆಗಳಿಗೆ ಬದ್ಧರಾಗಬೇಕಿಲ್ಲ

* ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸುವುದು ಮೇ ಅವರ ಉದ್ದೇಶ

ಪರಿಣಾಮ
* ಗೆದ್ದರೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಗೆ ಬಂದ ಬಳಿಕ ಮೂರು ವರ್ಷ ಮೇ ಅಧಿಕಾರದಲ್ಲಿರುತ್ತಾರೆ

* ಬ್ರೆಕ್ಸಿಟ್‌ ಮಾತುಕತೆ ಹೆಚ್ಚು ಸುಗಮವಾಗಿ ನಡೆಯಬಹುದು ಮತ್ತು ನಂತರದ ಪರಿವರ್ತನೆ ಮತ್ತು ಅದಕ್ಕೆ ಹೊಂದಿಕೊಳ್ಳುವುದು ಸುಮಗವಾಗಬಹುದು

* ಈಗಿರುವಷ್ಟೇ ಬಹುಮತ ಬಂದರೆ ಮೇ ಅವರ ಪ್ರಭಾವ ಕಡಿಮೆಯಾಗಬಹುದು

ಲೇಬರ್‌ ಪಕ್ಷದ ಇಕ್ಕಟ್ಟು
ಮುಖ್ಯ ವಿರೋಧ ಪಕ್ಷವಾಗಿರುವ ಲೇಬರ್‌ ಪಕ್ಷದ ಹೆಚ್ಚಿನ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳು ಬ್ರೆಕ್ಸಿಟ್‌ ಪರವಾಗಿ ಮತ ಚಲಾಯಿಸಿವೆ. ಜತೆಗೆ ಪಕ್ಷದೊಳಗೆ ಬ್ರೆಕ್ಸಿಟ್‌ ಕುರಿತು ಒಮ್ಮತದ ಅಭಿಪ್ರಾಯ ಇಲ್ಲ. ಹಾಗಾಗಿ ಈ ಪಕ್ಷ ಬ್ರೆಕ್ಸಿಟ್‌ ಬಗ್ಗೆ ಏನೂ ಮಾತನಾಡುತ್ತಿಲ್ಲ

ವಿರೋಧ ಪಕ್ಷಗಳಿಗೆ ಅನುಕೂಲಕರ ಅಂಶ
ಬ್ರೆಕ್ಸಿಟ್‌ ಫಲಿತಾಂಶದ ನಂತರ ಬ್ರಿಟನ್‌ ಐರೋಪ್ಯ ಒಕ್ಕೂಟದಲ್ಲಿಯೇ ಮುಂದುವರಿದಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಬ್ರಿಟನ್‌ನಲ್ಲಿ ವ್ಯಾಪಕವಾಗಿದೆ. ಜತೆಗೆ, ಬ್ರೆಕ್ಸಿಟ್‌ ವಿರುದ್ಧ ಶೇ 48.1ರಷ್ಟು ಮತ ಚಲಾವಣೆ ಆಗಿತ್ತು. ಈ ಮತಗಳ ಮೇಲೆ ವಿರೋಧ ಪಕ್ಷಗಳು ಕಣ್ಣಿಟ್ಟಿವೆ.

ಸ್ಕಾಟ್ಲೆಂಡ್‌ ಸ್ಥಿತಿ ಏನು
ಕಳೆದ ಚುನಾವಣೆಯಲ್ಲಿ ಸ್ಕಾಟಿಶ್ ನ್ಯಾಷನಲಿಸ್ಟ್‌ ಪಕ್ಷ 59ರ ಪೈಕಿ 56 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಅದು ಪುನರಾವರ್ತನೆ ಆಗುವುದು ಕಷ್ಟ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಅತಂತ್ರದ ಆತಂಕ
ಯಾವ ಪಕ್ಷವೂ ಬಹುಮತ ಪಡೆಯದಿರುವ ಸಾಧ್ಯತೆಯನ್ನು ಇತ್ತೀಚಿನ ಸಮೀಕ್ಷೆಗಳು ತೆರೆದಿಟ್ಟಿವೆ. ಆದರೆ, ಕನ್ಸರ್ವೇಟಿವ್‌ ಪಕ್ಷದ ಪರ ಮತದಾರರ ಒಲವಿನ ಪ್ರಮಾಣ ಶೇ 42ಕ್ಕಿಂತ ಕಡಿಮೆ ಆಗಿಲ್ಲ. ಅತಿ ದೊಡ್ಡ ಪಕ್ಷವಾಗಿ ಕನ್ಸರ್ವೇಟಿವ್‌ ಪಕ್ಷ ಮೂಡಿ ಬಂದರೆ ಲಿಬರಲ್‌ ಡೆಮಾಕ್ರಟ್ಸ್‌, ಯುಕೆಐಪಿಯಂತಹ ಪಕ್ಷಗಳು ಬೆಂಬಲ ನೀಡುವುದರಲ್ಲಿ ಅನುಮಾನ ಇಲ್ಲ.

ಕೇಂದ್ರ ಸ್ಥಾನದಲ್ಲಿ ಮೇ
ಕನ್ಸರ್ವೇಟಿವ್‌ ಪಕ್ಷ ಮೇ ಅವರ ಜನಪ್ರಿಯತೆಯನ್ನೇ ನೆಚ್ಚಿಕೊಂಡಿದೆ. ಪ್ರಚಾರ ಸಾಮಗ್ರಿಗಳಲ್ಲಿ ಮೇ ಅವರ ಬೃಹತ್‌ ಚಿತ್ರಗಳು ರಾರಾಜಿಸುತ್ತಿವೆ. ಹಾಗಾಗಿ ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎಂದು ಬಿಂಬಿಸಲು ಕನ್ಸರ್ವೇಟಿವ್‌ ಪಕ್ಷ ಪ್ರಯತ್ನಿಸುತ್ತಿದೆ.

ಜೆರೆಮಿ ಕಾರ್ಬಿನ್‌ ಸವಾಲು
2015ರ ಸಾರ್ವತ್ರಿಕ ಚುನಾವಣೆಯಲ್ಲಿ ಎಡ್‌ ಮಿಲಿಬ್ಯಾಂಡ್‌ ಲೇಬರ್‌ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದರು. ಆಗ ಪಕ್ಷಕ್ಕೆ ಶೇ 30.4ರಷ್ಟು ಮತಗಳು ಬಂದಿದ್ದವು. ಈ ಬಾರಿ ಇದಕ್ಕಿಂತ ಹೆಚ್ಚು ಮತಗಳು ಬಂದರೆ ಮಾತ್ರ ಕಾರ್ಬಿನ್‌ ಅವರು ಪಕ್ಷದ ನಾಯಕರಾಗಿ ಮುಂದುವರಿಯಬಹುದು.

ಸಮೀಕ್ಷೆಗಳ ಪ್ರಕಾರ, ಜನಪ್ರಿಯತೆಯಲ್ಲಿ ಮೇ ಅವರು ಕಾರ್ಬಿನ್‌ ಅವರಿಗಿಂತ ಮುಂದಿದ್ದಾರೆ. ಆದರೆ ಇತ್ತೀಚೆಗೆ ಕಾರ್ಬಿನ್‌ ಅವರ ಜನಪ್ರಿಯತೆಯ ಪ್ರಮಾಣ ಹೆಚ್ಚಾಗಿದೆ. ಶಿಕ್ಷಣ ಶುಲ್ಕ ಕಡಿಮೆ ಮಾಡುವ ಕಾರ್ಬಿನ್‌ ಅವರ ಭರವಸೆ ಯುವ ಜನರನ್ನು ಆಕರ್ಷಿಸಿದೆ. ಮೂವರಲ್ಲಿ ಇಬ್ಬರು ವಿದ್ಯಾರ್ಥಿಗಳು ಲೇಬರ್‌ ಪಕ್ಷದ ಪರವಾಗಿದ್ದಾರೆ. ಆದರೆ ಇವರು ಮತಗಟ್ಟೆಗೆ ಬರುತ್ತಾರೆಯೇ ಎಂಬುದಷ್ಟೇ ಇಲ್ಲಿನ ಪ್ರಶ್ನೆ.

ಜಿದ್ದಾ ಜಿದ್ದಿ

* ಜೆರಿಮಿ ಕಾರ್ಬಿನ್‌ ಅವರ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ ‘ಜೂನ್‌ನಲ್ಲಿ ‘ಮೇ’ ಕೊನೆಯಾಗಲಿದೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದೆ

* ಮೇ ಅವರಿಗೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯ. ಆದರೆ ಕಾರ್ಬಿನ್‌ ಅವರ ಮೇಲೆ ಅಂತಹ ಒತ್ತಡಗಳು ಯಾವುವೂ ಇಲ್ಲ. ಅವರು ಕನ್ಸರ್ವೇಟಿವ್‌ ಪಕ್ಷದ ಜನಪ್ರಿಯತೆಯನ್ನು ಕುಗ್ಗಿಸುವ ಪ್ರಯತ್ನವನ್ನು ಎಗ್ಗಿಲ್ಲದೆ ನಡೆಸುತ್ತಿದ್ದಾರೆ

* ಮೇ ಅವರ ಉದ್ದೇಶ ಬಹುಮತ ಹೆಚ್ಚಿಸುವುದು ಮಾತ್ರ. ಆದರೆ ಕಾರ್ಬಿನ್‌ ಅವರು ಮತದಾರರ ಗಮನವನ್ನು ಬ್ರೆಕ್ಸಿಟ್‌ನಿಂದ ಸಾಮಾಜಿಕ ವಿಚಾರಗಳತ್ತ ತಿರುಗಿಸಿದ್ದಾರೆ.

* ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿ ಬಹಿರಂಗ ಚರ್ಚೆಗೆ ಬರುವಂತೆ ಮೇ ಅವರಿಗೆ ಕಾರ್ಬಿನ್‌ ಸವಾಲೆಸೆದಿದ್ದಾರೆ. ಆದರೆ ಮೇ ಅದಕ್ಕೆ ಸಿದ್ಧವಾಗಿಲ್ಲ. ಅವರು ಚರ್ಚೆಗೆ ಬಾರದ್ದಕ್ಕೆ ಭಾರಿ ಟೀಕೆಯೂ ವ್ಯಕ್ತವಾಗಿದೆ.

* ಐರೋಪ್ಯ ಒಕ್ಕೂಟದ ಜತೆಗಿನ ಬ್ರೆಕ್ಸಿಟ್‌ ಮಾತುಕತೆ ಜೂನ್‌ 19ರಿಂದ ಆರಂಭವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.