ADVERTISEMENT

ಅನಾರೋಗ್ಯದ ರಜೆ:ಮಹಿಳೆಯರೇ ಮುಂದು

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST

ಲಂಡನ್, (ಪಿಟಿಐ):ಕಚೇರಿಗಳಲ್ಲಿ ಅನಾರೋಗ್ಯದ ಕಾರಣ ನೀಡಿ ರಜೆ ಪಡೆದುಕೊಳ್ಳುವವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ  ಹೆಚ್ಚು ಮತ್ತು ಇದಕ್ಕಾಗಿ ಅವರು ಮುಜುಗರ ಉಂಟು ಮಾಡುವಂತಹ ಕಾರಣಗಳನ್ನೂ  ನೀಡುತ್ತಾರೆ  ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.

ಇಲ್ಲಿನ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ‘ಸವರಿನ್ ಹೆಲ್ತ್‌ಕೇರ್’ ನಡೆಸಿರುವ ಈ ಸಮೀಕ್ಷೆಯಲ್ಲಿ ಮೂಡಿ ಬಂದ ವಾಸ್ತವಾಂಶಗಳನ್ನು  ಮಹಿಳೆಯರು ಒಪ್ಪದೇ ಇರಬಹುದು, ಆದರೆ ಇದು ಸತ್ಯವಂತೂ ಹೌದು ಎಂದೂ ಸಮೀಕ್ಷೆಯ ಮುನ್ನುಡಿಯಲ್ಲಿಯೇ ಪ್ರಸ್ತಾಪಿಸಲಾಗಿದೆ. 

ಆರೋಗ್ಯವಂತರಾಗಿದ್ದರೂ ಕೂಡ, ಅನಾರೋಗ್ಯದ ನೆಪ ಒಡ್ಡಿ ರಜೆ ತೆಗೆದುಕೊಳ್ಳುವವರಲ್ಲಿ ಮಹಿಳೆಯರು ನಿಸ್ಸೀಮರು ಮತ್ತು ಯಾವುದೇ ಸಂಸ್ಥೆಗಳಲ್ಲಿ ಇಂತಹ ‘ಹುಸಿ ಕಾರಣ’ಗಳಿಗೆ ರಜೆ ಪಡೆಯುವವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ ಎಂದೂ ಈ ಸಮೀಕ್ಷೆ ತಿಳಿಸಿದೆ.

ಸುಮಾರು 1,360 ಮಂದಿ ಪಾಲ್ಗೊಂಡಿದ್ದ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯನ್ನು ಪ್ರಕಟಿಸಿರುವ ‘ಟೆಲಿಗ್ರಾಫ್’ ವರದಿ ಮಾಡಿದೆ.ಅಷ್ಟೇ ಅಲ್ಲದೆ, ಅವರು ರಜೆಗಾಗಿ ‘ಮಹಿಳೆಯರ ಸಮಸ್ಯೆಗಳನ್ನೇ’ ಮುಖ್ಯ ಕಾರಣವಾಗಿ ನೀಡುತ್ತಾರೆ ಎನ್ನುವುದಕ್ಕೆ ಎಲ್ಲರ ಸಹಮತವೂ ಇದೆ ಎಂದೂ ಸಮೀಕ್ಷೆ ತಿಳಿಸಿದೆ. 

ಕೆಲವೊಮ್ಮೆ ಮಹಿಳೆಯರು ರಜೆಗಾಗಿ ‘ನಾಯಿ ತನ್ನ ಕಾಲು ಮುರಿದು ಕೊಂಡಿದೆ, ಅದರ ಆರೈಕೆ ಮಾಡಬೇಕು’,‘ನಮ್ಮ ಮನೆಯಿಂದ ಬೆಕ್ಕಿನ ಮರಿ ಕಾಣೆಯಾಗಿದೆ, ಅದನ್ನು ಹುಡುಕಬೇಕು’, ‘ನನ್ನ ಪಾದರಕ್ಷೆ ಗಳು ಕಾಣೆಯಾಗಿರುವುದರಿಂದ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ’ ಇತ್ಯಾದಿ ಕ್ಷುಲ್ಲಕ ಕಾರಣಗಳನ್ನೂ ನೀಡುತ್ತಾರೆಂದೂ  ಸಮೀಕ್ಷೆಯಲ್ಲಿ ತಿಳಿಸಲಾಗಿದೆ  ಎಂದು ‘ಸವರಿನ್ ಹೆಲ್ತ್ ಕೇರ್’ನ ಮುಖ್ಯಸ್ಥ ರುಸ್ ಪೈಪರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.