ವಾಷಿಂಗ್ಟನ್/ಜೆರುಸಲೆಂ (ಐಎಎನ್‌ಎಸ್/ಪಿಟಿಐ): ಭಯೋತ್ಪಾದಕ ಲಾಡೆನ್‌ನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾದ ಅಮೆರಿಕವನ್ನು ಆಸ್ಟ್ರೇಲಿಯಾ ಪ್ರಧಾನಿ ಜುಲಿಯಾ ಗಿಲ್ಲಾರ್ಡ್ ಅಭಿನಂದಿಸಿದ್ದಾರೆ.
‘ಲಾಡೆನ್ ಸಾವಿನೊಂದಿಗೆ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ಅಂತ್ಯಗೊಳ್ಳುವುದಿಲ್ಲ. ಅಲ್‌ಖೈದಾ ಮತ್ತು ಇತರ ಸಂಘಟನೆಗಳು ಒಡ್ಡಿರುವ ಬೆದರಿಕೆಯ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಉಗ್ರರನ್ನು ಮಟ್ಟ ಹಾಕುವ ಅಮೆರಿಕ ಮತ್ತು ಇತರ ದೇಶಗಳ ಹೋರಾಟಕ್ಕೆ ನಮ್ಮ ಬೆಂಬಲವನ್ನು ಮುಂದುವರಿಸುತ್ತೇವೆ. ಆಫ್ಘಾನಿಸ್ತಾನ ಪುನಃ ಉಗ್ರರಿಗೆ ಸುರಕ್ಷಿತ ಸ್ವರ್ಗವಾಗದಂತೆ ಮಾಡುವವರೆಗೂ ಪ್ರಯತ್ನ ನಡೆಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಮೆಚ್ಚುಗೆ
‘ಇದು ಭಯೋತ್ಪಾದನೆಯ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ನಡೆಸುತ್ತಿರುವ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳ ನ್ಯಾಯ, ಸ್ವಾತಂತ್ರ್ಯ ಮತ್ತಿತರ ಮೌಲ್ಯಗಳಿಗೆ ದೊರೆತ ಜಯ. ಈ ಐತಿಹಾಸಿಕ ದಿನದ ಅಮೆರಿಕದ ಜನತೆಯ ಸಂತೋಷವನ್ನು ಇಸ್ರೇಲ್ ಕೂಡ ಹಂಚಿಕೊಳ್ಳುತ್ತದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಟನ್ಯಾಹು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.