ADVERTISEMENT

ಅಮೆರಿಕಕ್ಕೆ ಇರಾನ್ ಅಂತಿಮ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಟೆಹರಾನ್ (ಎಎಪ್‌ಪಿ): ಅಮೆರಿಕದ ನೌಕಾಪಡೆಯ ಯುದ್ಧನೌಕೆ ಮತ್ತೊಮ್ಮೆ ಪರ್ಷಿಯನ್ ಕೊಲ್ಲಿ ಪ್ರವೇಶಿಸಬಾರದು ಎಂದು ಇರಾನ್ ತೀಕ್ಷ್ಣವಾಗಿ ಎಚ್ಚರಿಕೆ ನೀಡಿದ್ದು, ಇದರಿಂದಾಗಿ ಈ ವಲಯದಲ್ಲಿ ಯುದ್ಧ ಭೀತಿ ತಲೆದೋರಿದೆ.

ತನ್ನ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದ್ದಕ್ಕೆ ಪ್ರತಿಯಾಗಿ ಇರಾನ್ ಈ ಕ್ರಮಕ್ಕೆ ಮುಂದಾಗಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

`ನಾವು ಪದೇಪದೇ ಎಚ್ಚರಿಕೆ ನೀಡುವುದಿಲ್ಲ, ಒಮ್ಮೆ ನೀಡಿದ ಎಚ್ಚರಿಕೆಯೇ ಅಂತಿಮ~ ಎಂದು ಬ್ರಿಗೇಡಿಯರ್ ಜನರಲ್ ಅತಾವುಲ್ಲಾ ಸಲೆಹ್ ಸ್ಪಷ್ಟಪಡಿಸಿದ್ದಾರೆ. ಪರ್ಷಿಯನ್ ಕೊಲ್ಲಿಯ ಪ್ರವೇಶ ದ್ವಾರದಲ್ಲಿ ಯುದ್ಧ ಕವಾಯತು ಮುಗಿಸಿದ 10 ದಿನಗಳಲ್ಲೇ ಇರಾನ್ ಹೀಗೆ ಎಚ್ಚರಿಕೆ ನೀಡಿದೆ.

ತನ್ನ ನೌಕಾಪಡೆಯು ಪರ್ಷಿಯನ್ ಕೊಲ್ಲಿಯಲ್ಲಿ ಯುದ್ಧ ಕವಾಯತು ನಡೆಸುತ್ತಿದ್ದ ಸಂದರ್ಭದಲ್ಲಿ ಅಮೆರಿಕ ಅಣ್ವಸ್ತ್ರ ಸಹಿತ ಯುದ್ಧ ಹಡಗಾದ `ಜಾನ್ ಸಿ. ಸ್ಟೆನ್ನಿಸ್~ ಹಾರ್ಮುಜ್ ಮಾರ್ಗವಾಗಿ ಒಮನ್‌ನೆಡೆಗೆ ಸಾಗಿ ಹೋಗಿದ್ದು ಇರಾನ್‌ನ್ನು ಕೆರಳಿಸಿತ್ತು.

ಈ ಹಡಗು 90 ಯುದ್ಧ ವಿಮಾನಗಳನ್ನು ಮತ್ತು ಹೆಲಿಕಾಪ್ಟರ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.