ADVERTISEMENT

ಅಮೆರಿಕಕ್ಕೆ ಯಾಂಗ್‌ ಚೊಲ್‌

ಏಜೆನ್ಸೀಸ್
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಕಿಮ್‌ ಯಾಂಗ್‌ ಚೊಲ್‌
ಕಿಮ್‌ ಯಾಂಗ್‌ ಚೊಲ್‌   

ಸೋಲ್‌: ಉತ್ತರ ಕೊರಿಯಾದ ಸೇನಾ ಜನರಲ್‌ ಅಮೆರಿಕ ಭೇಟಿಗೆ ಮುಂದಾಗಿದ್ದು, ಈ ಮೂಲಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವಿನ ಐತಿಹಾಸಿಕ ಭೇಟಿ ಮತ್ತಷ್ಟು ಖಚಿತವಾಗಿದೆ.

‘ಜನರಲ್‌ ಕಿಮ್‌ ಯಾಂಗ್‌ ಚೊಲ್‌ ಮಂಗಳವಾರ ಬೀಜಿಂಗ್‌ ವಿಮಾನನಿಲ್ದಾಣಕ್ಕೆ ಬಂದಿಳಿದರು. ಚೀನಾದ ಹಿರಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ಬಳಿಕ ನ್ಯೂಯಾರ್ಕ್‌ನತ್ತ ತೆರಳಲಿದ್ದಾರೆ’ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಯೊನ್‌ಹಾಪ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಜನರಲ್‌ ಕಿಮ್‌ ಯಾಂಗ್‌ ಚೊಲ್‌ ಅವರು ಉತ್ತರಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕಿಮ್‌ಜಾಂಗ್‌ ಅವರು ಚೀನಾಕ್ಕೆ ಭೇಟಿ ನೀಡಿದ್ದ ವೇಳೆ ಕೂಡ ಜೊತೆಗಿದ್ದರು.

ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ನಡುವೆ ಇದೇ ಜೂನ್‌ 12 ರಂದು ಸಿಂಗಾಪುರದಲ್ಲಿ ಭೇಟಿ ನಿಗದಿಯಾಗಿ, ನಂತರ ರದ್ದುಗೊಂಡಿತ್ತು. ಇದರ ಬೆನ್ನಲ್ಲೇ ಫಿಲಿಫೈನ್ಸ್‌ನಲ್ಲಿನ ಅಮೆರಿಕ ರಾಯಭಾರಿ ಸುಂಗ್‌ ಕಿಮ್‌ ಅವರು ಭಾನುವಾರ ಉತ್ತರ ಕೊರಿಯಾದ ಪನ್‌ಮುನ್‌ಜೊಮ್‌ನಲ್ಲಿ ಎರಡು ದೇಶಗಳ ರಾಯಭಾರಿಗಳನ್ನು ಭೇಟಿಯಾಗಿ ಗೊಂದಲಗಳನ್ನು ಬಗೆಹರಿಸಿದ್ದರು. ಇದಾದ ಬಳಿಕ ಕಿಮ್‌–ಟ್ರಂಪ್‌ ಭೇಟಿ ಮತ್ತೆ ಖಚಿತಗೊಂಡಿತ್ತು.

ಭೇಟಿ ಖಚಿತಪಡಿಸಿದ ಟ್ರಂಪ್‌

ವಾಷಿಂಗ್ಟನ್‌: ‘ಕಿಮ್‌ ಜಾಂಗ್‌ ಉನ್‌ ಜೊತೆಗಿನ ಸಂಭಾವ್ಯ ಭೇಟಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಉತ್ತರ ಕೊರಿಯಾದ ಅಧಿಕಾರಿಗಳು ನ್ಯೂಯಾರ್ಕ್‌ನತ್ತ ಪ್ರವಾಸ ಕೈಗೊಂಡಿದ್ದಾರೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಚಿತಪಡಿಸಿದ್ದಾರೆ.

‘ದೇಶದ ಅತ್ಯುತ್ತಮ ತಂಡವು ಉತ್ತರ ಕೊರಿಯಾ ಜೊತೆ ಮಾತುಕತೆ ನಡೆಸಲಿದ್ದು, ಸಭೆಯಲ್ಲಿ ಪ್ರಸ್ತಾಪಿಸಲಿರುವ ವಿಚಾರದ ಕುರಿತಂತೆ ಚರ್ಚಿಸಲಿದೆ. ಉತ್ತರ ಕೊರಿಯಾದ ಸೇನಾ ಜನರಲ್‌ ಕಿಮ್‌ ಯಾಂಗ್‌ ಚೊಲ್ ನ್ಯೂಯಾರ್ಕ್‌ನತ್ತ ಬರುತ್ತಿದ್ದು, ನನ್ನ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಧನ್ಯವಾದ’ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.