ADVERTISEMENT

ಅಮೆರಿಕದ ಬೆಂಬಲ ಅಗತ್ಯ

ಭಾರತ-ಪಾಕ್ ಸಂಬಂಧ ವೃದ್ಧಿ: ತಜ್ಞರ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ವಾಷಿಂಗ್ಟನ್ (ಪಿಟಿಐ): `ಭಾರತದ ಜತೆಗಿನ ಸಂಬಂಧ ಸುಧಾರಿಸಿಕೊಳ್ಳಲು ಪಾಕಿಸ್ತಾನದ ಹೊಸ ಪ್ರಧಾನಿ ನವಾಜ್ ಷರೀಫ್ ಅವರಿಗೆ ಅಮೆರಿಕ ಅಗತ್ಯ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು' ಎಂದು ರಾಜಕೀಯ ತಜ್ಞರು ಸಲಹೆ ಮಾಡಿದ್ದಾರೆ.

`ಪಾಕಿಸ್ತಾನದ ಭವಿಷ್ಯದ ದೃಷ್ಟಿಯಿಂದ ಆ ದೇಶವು ಭಾರತದ ಜತೆ ಸೌಹಾರ್ದ ಸಂಬಂಧ ಹೊಂದುವುದು ಮುಖ್ಯವಾಗುತ್ತದೆ' ಎಂದು ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಿಐಎ ಮಾಜಿ ಅಧಿಕಾರಿ ಮತ್ತು ಬ್ರೂಕಿಂಗ್ಸ್ ಸಂಸ್ಥೆಯ ಸಂಶೋಧನಾ ಅಭ್ಯರ್ಥಿ ಬ್ರೂಸ್ ರೈಡೆಲ್ ಅಭಿಪ್ರಾಯಪಟ್ಟಿದ್ದಾರೆ.

`ಒಂದು ವೇಳೆ ಷರೀಫ್ ಭಾರತದ ಜತೆಗಿನ ಸಂಬಂಧ ಸುಧಾರಿಸಲು ಯಶಸ್ವಿಯಾದಲ್ಲಿ ಅಲ್ಲಿಯ ಸೇನೆ ಮತ್ತು ಸರ್ಕಾರದ ನಡುವಿನ ಬಾಂಧವ್ಯ ವೃದ್ಧಿಯ ಜತೆಗೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಆನೆ ಬಲ ಬಂದಂತಾಗುತ್ತದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಬಹುದು. ಷರೀಫ್ ಕೂಡ ಈ ದಿಸೆಯಲ್ಲಿ ಉತ್ಸಾಹ ತೋರಿಸಿದ್ದು ಅವರಿಗೆ ಅಮೆರಿಕ ಎಲ್ಲ ಅಗತ್ಯ ನೆರವು ನೀಡಲು ಮುಂದಾಗಬೇಕಿದೆ' ಎಂದು ರೈಡೆಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

`ಪಾಕಿಸ್ತಾನದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಗತಿ ಕುಂಠಿತಗೊಂಡಿದೆ. ಇಂಧನ ಮತ್ತು ಮೂಲಸೌಕರ್ಯ ಸಮಸ್ಯೆ ತೀವ್ರವಾಗಿದೆ. ಷರೀಫ್ ಅವರಿಗೆ ಆರ್ಥಿಕ ಸ್ಥಿತಿ ಸುಧಾರಿಸದ ಹೊರತು ಪ್ರಗತಿ ಸಾಧ್ಯವಿಲ್ಲ ಎನ್ನುವುದು ಚೆನ್ನಾಗಿ ಗೊತ್ತು. ಪಾಕ್ ಅರ್ಥ ವ್ಯವಸ್ಥೆ ಸುಧಾರಣೆಗೆ ಭಾರತದೊಂದಿಗೆ ಬಾಂಧವ್ಯ ಸುಧಾರಣೆ ಹೊರತು ಅನ್ಯ ಮಾರ್ಗವಿಲ್ಲ ಎಂಬುದೂ ಅವರಿಗೆ ತಿಳಿದಿದೆ' ಎಂದು ರೈಡೆಲ್ ಅಭಿಪ್ರಾಯಪಟ್ಟಿದ್ದಾರೆ.

ಅಜೀಜ್ ಭದ್ರತಾ ಸಲಹೆಗಾರ
ಇಸ್ಲಾಮಾಬಾದ್ (ಪಿಟಿಐ):
ವಿದೇಶಾಂಗ ವ್ಯವಹಾರ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಪಾಕಿಸ್ತಾನದ ನೂತನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಮಾಜಿ ಸಚಿವ ಸರ್‌ತಾಜ್ ಅಜೀಜ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾರೆ.

ಷರೀಫ್ ಅವರು 90ರ ದಶಕದ ಕೊನೆಯಲ್ಲಿ ಪ್ರಧಾನಿಯಾಗಿದ್ದಾಗ ಹಣಕಾಸು ಹಾಗೂ ವಿದೇಶಾಂಗ ಸಚಿವರಾಗಿ ಅಜೀಜ್ ಕಾರ್ಯನಿರ್ವಹಿಸಿದ್ದರು.`ಭಾರತ, ಅಮೆರಿಕ ಹಾಗೂ ಆಫ್ಘಾನಿಸ್ತಾನದ ವಿಷಯದಲ್ಲಿ ಹೊಸ ಸರ್ಕಾರದ ನೂತನ ನೀತಿ ರೂಪಿಸುವಲ್ಲಿ ಅಜೀಜ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ' ಎಂದು ಪಿಎಂಎಲ್-ಎನ್ ಮೂಲಗಳು ತಿಳಿಸಿವೆ.

ಒಳಾಡಳಿತ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಮತ್ತು ತಾಲಿಬಾನ್ ಬಂಡುಕೋರರನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT