
ಸ್ಟಾಕ್‌ಹೋಮ್ (ಎಎಫ್‌ಪಿ): ಸಂಪತ್ತಿನ ಮಾರುಕಟ್ಟೆಗಳಲ್ಲಿ ಏರಿಳಿಕೆಯ ಸ್ಥಿತಿಗತಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಾದ ಲಾರ್ಸ್ ಪೀಟರ್ ಹನ್ಸನ್, ಯ್ಯೂಗಿನ್ ಫಮಾ ಮತ್ತು ರಾಬರ್ಟ್ ಶಿಲ್ಲರ್ ಅವರಿಗೆ ಈ ವರ್ಷದ ನೊಬೆಲ್ ಪುರಸ್ಕಾರ ಲಭಿಸಿದೆ.
‘ಸದ್ಯದ ಸಂಪತ್ತಿನ ಬೆಲೆಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗೆ ಮೂವರು ಅಡಿಪಾಯ ಹಾಕಿದ್ದಾರೆ’ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿದೆ. ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯು ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ಅರ್ಥಶಾಸ್ತ್ರಜ್ಞರ ಹೆಸರುಗಳನ್ನು ಪ್ರಕಟಿಸಿತು.
ಫಮಾ ಮತ್ತು ಹೆನ್ಸನ್ ಅವರು ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಮತು್ತ ರಾಬರ್ಟ್ ಶಿಲ್ಲರ್ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಣಕಾಸು ಕ್ಷೇತ್ರವನ್ನು ‘ಮಾನವನ ಚಟುವಟಿಕೆಗಳಿಗೆ ಅಗತ್ಯವಾದ ಮೂಲಭೂತ ಕ್ಷೇತ್ರ’ ಎಂದು ಶಿಲ್ಲರ್ ಬಣ್ಣಿಸಿದ್ದಾರೆ. ‘ಹಣಕಾಸು ಅಥವಾ ಆಯವ್ಯಯ ಶಾಸ್ತ್ರ ಎಂದರೆ ಹಲವಾರು ವಿವಾದಿತ ಅಂಶಗಳನ್ನೊಳಗೊಂಡ ಸಿದ್ಧಾಂತ. ಇದರಿಂದ ಸಮಾಜಕ್ಕೆ ಪ್ರಯೋಜನವಿದೆ. ಮಾನವನ ಕಲ್ಯಾಣಕ್ಕೂ ಇದು ನೆರವಾಗಲಿದೆ. ಇಂತಹ ಕ್ಷೇತ್ರವನ್ನು ಗುರುತಿಸಿರುವುದಕ್ಕೆ ಸಂತಸವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.