ADVERTISEMENT

ಆಘ್ಘನ್ ಪುನರ್‌ನಿರ್ಮಾಣದಲ್ಲಿ ಭಾರತಕ್ಕೆ ಆದ್ಯತೆ

ಭಾರತೀಯ ಮೂಲದ ಸಂಸದ ಅಮಿ ಬೆರಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಆಘ್ಘಾನಿಸ್ತಾನದ ಪುನರ್‌ನಿರ್ಮಾಣದಲ್ಲಿ ಭಾರತದ ಮಹತ್ವ ಏನೆಂಬುದನ್ನು ಅರಿತು ಆ ರಾಷ್ಟ್ರದೊಂದಿಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಿಕೊಳ್ಳಲು ಒತ್ತು ನೀಡಬೇಕು ಎಂದು ಅಮೆರಿಕ ಜನಪ್ರತಿನಿಧಿ ಸಭೆಯಲ್ಲಿನ ಏಕೈಕ ಭಾರತೀಯ- ಅಮೆರಿಕನ್ ಸಂಸದರಾದ ಅಮಿ ಬೆರಾ ಅವರು ಒತ್ತಾಯಿಸಿದ್ದಾರೆ.

`ದಕ್ಷಿಣ ಏಷ್ಯಾದ ಸುರಕ್ಷತೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ವಹಿಸಬೇಕಾದ ಪಾತ್ರವು ಮಹತ್ತರವಾದುದಾಗಿದೆ' ಎಂದು ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‌್ರಿ ಅವರಿಗೆ ಶುಕ್ರವಾರ ಬರೆದ ಪತ್ರದಲ್ಲಿ ಹೇಳಿದ್ದಾರೆ. ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ರಾಷ್ಟ್ರಗಳ ವ್ಯವಹಾರಕ್ಕಾಗಿ ರಚಿಸಲಾಗಿರುವ ಉಪ ಸಮಿತಿ ಅಧ್ಯಕ್ಷರಾದ ಇಲೆಯಾನಾ ರಾಸ್- ಲೆಹ್‌ಟಿನೆನ್ ಅವರೊಂದಿಗೆ ಜಂಟಿಯಾಗಿ ಈ ಪತ್ರ ಬರೆದಿದ್ದಾರೆ.

ಆಘ್ಘಾನಿಸ್ತಾನದಲ್ಲಿ ಮೂಲಭೂತ ಸೌಲಭ್ಯಗಳ ಮರುನಿರ್ಮಾಣ, ಅಲ್ಲಿನ ಭದ್ರತಾ ಪಡೆಗಳಿಗೆ ತರಬೇತಿ ಹಾಗೂ ಆ ರಾಷ್ಟ್ರದ ಯುದ್ಧೋತ್ತರ ಆರ್ಥಿಕ ಬೆಳವಣಿಗೆಯಲ್ಲಿ ಭಾರತವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅಮೆರಿಕ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗಷ್ಟೇ ಆಘ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಈ ಇಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಆಘ್ಘಾನಿಸ್ತಾನ ಪ್ರವಾಸದ ವೇಳೆ ತಮ್ಮ ಗಮನಕ್ಕೆ ಬಂದ ವಿಶೇಷ ಸಂಗತಿಗಳನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ, ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ಕಾರ್ಯತಂತ್ರ ಒಪ್ಪಂದಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.

ಆಘ್ಘಾನಿಸ್ತಾನವು ಉತ್ಪನ್ನ ವಹಿವಾಟು ಆಧರಿಸಿದ ಆರ್ಥಿಕತೆ ಅಳವಡಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಭಾರತದ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಮನಗಾಣಬೇಕು. ಮಾದಕ ವಸ್ತು ವಹಿವಾಟಿನಿಂದಾಗಿ ಶಿಥಿಲವಾಗಿರುವ ಆಘ್ಘಾನಿಸ್ತಾನದ ಕಾನೂನು ವ್ಯವಸ್ಥೆ ಮತ್ತಷ್ಟು ದುರ್ಬಲವಾಗುವುದನ್ನು ತಡೆಗಟ್ಟಲು ಇದು ನೆರವು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಪ್ರಾದೇಶಿಕ ಶಾಂತಿ ಮತ್ತು ಜಾಗತಿಕ ಸುರಕ್ಷತೆ ಸ್ಥಾಪಿಸುವಲ್ಲಿ ಭಾರತ ಮತ್ತು ಅಮೆರಿಕ ಸಮಾನ ಆಸಕ್ತಿ ಹೊಂದಿವೆ ಎಂದೂ ಅವರು ಹೇಳಿದ್ದಾರೆ.

ಭಾರತಕ್ಕೆ ಜಾನ್ ಕೆರ್ರಿ
ಏಷ್ಯಾ ರಾಷ್ಟ್ರಗಳ 10 ದಿನಗಳ ಪ್ರವಾಸಕ್ಕಾಗಿ ಜಾನ್ ಕೆರ‌್ರಿ ಅವರು ವಾಷಿಂಗ್ಟನ್‌ನಿಂದ ಶುಕ್ರವಾರ  ಹೊರಟಿದ್ದಾರೆ. ಜೂನ್ 23ರಿಂದ 25ರವರೆಗೆ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ನಾಲ್ಕನೇ ಕಾರ್ಯತಂತ್ರ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT