ADVERTISEMENT

ಆನ್‌ಲೈನ್‌ನಲ್ಲಿ ನೇತಾಜಿ ಅಂತ್ಯಕ್ರಿಯೆ ದಾಖಲೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 20:12 IST
Last Updated 21 ಜನವರಿ 2016, 20:12 IST
ಆನ್‌ಲೈನ್‌ನಲ್ಲಿ ನೇತಾಜಿ ಅಂತ್ಯಕ್ರಿಯೆ ದಾಖಲೆ
ಆನ್‌ಲೈನ್‌ನಲ್ಲಿ ನೇತಾಜಿ ಅಂತ್ಯಕ್ರಿಯೆ ದಾಖಲೆ   

ಲಂಡನ್‌(ಪಿಟಿಐ):  ಭಾರತದ ಸ್ವಾತಂತ್ರ್ಯ ಸೇನಾನಿ, 1945ರ ವಿಮಾನ ದುರಂತದಲ್ಲಿ ಸಾವಿಗೀಡಾದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬ್ರಿಟನ್‌ನ ವೆಬ್‌ಸೈಟ್‌ www.bosefiles.info ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ. ಸ್ಥಳೀಯರೊಂದಿಗೆ ಸೇರಿ ಅಂತ್ಯಸಂಸ್ಕಾರ ನಡೆಸಿದ ತೈವಾನ್‌ ಅಧಿಕಾರಿ ಟನ್‌ ಟಿ ಟಿ ನೀಡಿರುವ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ.

1956ರಷ್ಟು ಹಿಂದಿನ ಬ್ರಿಟನ್‌ನ ವಿದೇಶಾಂಗ ಕಚೇರಿಯ ಕಡತ ಸಂಖ್ಯೆ ಎಫ್‌ಸಿ 1852/6ಅನ್ನು ಪುರಾವೆಯಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯ ಸೇನಾನಿ ನೇತಾಜಿ ಅವರು ತೈಪೆನ ಹೊರವಲಯದಲ್ಲಿ 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು ಎಂದು ವೆಬ್‌ಸೈಟ್‌ನ ದಾಖಲೆಗಳು ಪ್ರತಿಪಾದಿಸಿವೆ.

‘ತೈಪೆಯಲ್ಲಿ ಅಂತ್ಯಕ್ರಿಯೆಗೆ ಅನುಮತಿ ನೀಡುವ ಅಧಿಕಾರಿಯಾಗಿದ್ದ ಟನ್‌ ಟಿ ಟಿ ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ನೇತಾಜಿ ಅವರ ಅಂತ್ಯಕ್ರಿಯೆ ನಡೆಸಿದ್ದಾಗಿ  ಹೇಳುವ ಮೂಲಕ ನೇತಾಜಿ ಅವರ ಸಾವಿನ ಬಗೆಗಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ’ ಎಂದು ವೆಬ್‌ಸೈಟ್ ತಿಳಿಸಿದೆ. ನೇತಾಜಿ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವುದು ನಿಜವೇ ಎಂಬ ವಿಷಯ ದಶಕಗಳಿಂದ ವಿವಾದ ಕ್ಕೀಡಾಗಿದ್ದು, ಈ ಬಗ್ಗೆ ಭಾರತ ಸರ್ಕಾರ ತನಿಖೆಗಳನ್ನೂ ಕೈಗೊಂಡಿತ್ತು.

ಮರಣ ಪ್ರಮಾಣಪತ್ರ: ‘ನೇತಾಜಿ ಮೃತದೇಹವನ್ನು ತಂದಿದ್ದ ಜಪಾನ್ ಸೇನಾಧಿಕಾರಿ, ಅಗತ್ಯ ವ್ಯವಹಾರಕ್ಕಾಗಿ ಟೋಕಿಯೊಗೆ ಬಂದಿದ್ದ ಭಾರತದ ನಾಯಕ ನೇತಾಜಿ ಅವರು ವಿಮಾನ ದುರಂತದಲ್ಲಿ ಗಾಯಗೊಂಡು ನಂತರ ಸಾವನ್ನಪ್ಪಿದ್ದರು ಎಂದು ಟನ್‌ ಟಿ ಟಿ ಅವರಿಗೆ ಹೇಳಿದ್ದರು. 1945ರ ಆಗಸ್ಟ್ 21ರಂದು ಅದೇ ಸೇನಾಧಿಕಾರಿ ಟನ್‌ ಟಿ ಟಿ ಅವರಿಗೆ ಇಚಿರೊ ಒಕುರ ಹೆಸರಿನಲ್ಲಿ ಮರಣ ಪ್ರಮಾಣಪತ್ರವೊಂದನ್ನು ನೀಡಿದ್ದರು’ ಎಂದು ವೆಬ್‌ಸೈಟಿನಲ್ಲಿ ವಿವರಿಸಲಾಗಿದೆ.

‘ಎರಡನೇ ವಿಶ್ವಯುದ್ಧದ ವೇಳೆ ತೈವಾನ್‌ನಲ್ಲಿ ಮಿಲಿಟರಿ ಆಸ್ಪತ್ರೆ ನೀಡಿದ್ದ ಮರಣ ಪ್ರಮಾಣಪತ್ರದ ಆಧಾರದಲ್ಲಿ, ಕುಟುಂಬ ಸದಸ್ಯರನ್ನು ಹೊರತುಪಡಿಸಿದ ಮಿಲಿಟರಿ ವ್ಯಕ್ತಿಯೊಬ್ಬನ (ಆಗ ನೇತಾಜಿ ಇಂಡಿಯನ್‌ ನ್ಯಾಷನಲ್ ಆರ್ಮಿಯ ಮುಖ್ಯಸ್ಥರಾಗಿದ್ದರು) ಅಂತ್ಯಕ್ರಿಯೆಗೆ ಅನುಮತಿ ನೀಡಲಾಗಿತ್ತು’ ಎಂಬುದನ್ನು ತೈವಾನ್‌ ಪ್ರಾಂತ್ಯದ ಗವರ್ನರ್ ಸಿ.ಕೆ. ಯೆನ್ ಅವರು ಬ್ರಿಟನ್‌ ರಾಯಭಾರಿ ಫ್ರಾಂಕ್ಲಿನ್‌ಗೆ ದೃಢಪಡಿಸಿದ್ದರು.

ಇಚಿರೊ ಒಕುರ ಹೆಸರಿನಲ್ಲಿ ಅಂತ್ಯಕ್ರಿಯೆ ನಡೆಸಿರುವ ಬಗ್ಗೆ ತೈವಾನ್‌ನ ಮುನ್ಸಿಪಲ್‌ ಆರೋಗ್ಯ ಕೇಂದ್ರದ ರಿಜಿಸ್ಟರ್‌ನಲ್ಲಿ ದಾಖಲಾಗಿತ್ತು. ಹೀಗೆ ತೈವಾನ್‌ ಆರೋಗ್ಯ ಇಲಾಖೆ ನೀಡಿದ್ದ ಮಾಹಿತಿ ಆಧಾರದಲ್ಲಿ ಪೊಲೀಸರು ವರದಿ ಸಿದ್ಧಪಡಿಸಿದ್ದರು.

ನೇತಾಜಿ ಅಂತ್ಯಕ್ರಿಯೆ ನಡೆಸಿದ ದಿನವೇ ಭಾರತಕ್ಕೆ ಸೇರಿದ್ದ ಕಾರೊಂದರಲ್ಲಿ ನೇತಾಜಿ ಅವರ ಸೇನೆಯ ಕರ್ನಲ್‌ ಆಗಿದ್ದ ಹಬಿಬುರ್‌ ರೆಹಮಾನ್‌ (ವಿಮಾನ ದುರಂತದಲ್ಲಿ ಬದುಕುಳಿದ್ದವರು) ಅವರ ಜತೆ ಅದೇ ಜಪಾನ್‌ ಸೇನಾಧಿಕಾರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು’ ಎಂಬುದನ್ನೂ ಖಚಿತಪಡಿಸಿದ್ದಾರೆ.

‘ಅವರೊಂದಿಗೆ ಲಿನ್‌ ಸುಮು ಎಂಬುವರು ಬಂದಿದ್ದರು. ಅವರು ನೇತಾಜಿ ಅವರ ಶವ ಇಟ್ಟಿದ್ದ ಪೆಟ್ಟಿಗೆಯನ್ನು ತೆಗೆದು ನೋಡಿದ್ದರು. ನಂತರ ಆ ಶವಪಟ್ಟಿಗೆಯನ್ನು ಟೋಕಿಯೊಗೆ ತೆಗೆದುಕೊಂಡು ಹೋಗಬೇಕೆಂದು ಪ್ರಯತ್ನಿಸಿದ್ದರು. ಆದರೆ, ಆಗಿನ ಕಾಲದ ವಿಮಾನದಲ್ಲಿ ಶವಪೆಟ್ಟಿಗೆ ಇಡುವಷ್ಟು ದೊಡ್ಡ ಜಾಗ ಇರಲಿಲ್ಲವಾದ್ದರಿಂದ ಅನಿವಾರ್ಯವಾಗಿ ನೇತಾಜಿ ಅವರ ಅಂತ್ಯಸಂಸ್ಕಾರವನ್ನು ತೈಪೆನಲ್ಲಿ ಮರುದಿನ ಅಂದರೆ 1945 ಆಗಸ್ಟ್ 23ರಂದು ಮಾಡಲಾಯಿತು. ನಂತರ ಜಪಾನ್‌ ಸೇನಾಧಿಕಾರಿ ಹಾಗೂ ಹಬಿಬುರ್‌ ರೆಹಮಾನ್‌ ನೇತಾಜಿ ಅವರ ಚಿತಾಭಸ್ಮವನ್ನು ಕೊಂಡೊಯ್ದರು’ ಎಂದು ಟನ್ ಟಿ ಟಿ ಹೇಳಿದ್ದಾರೆ.

ಟಿನ್‌ ಹೇಳಿಕೆ 1945ರ ಆಗಸ್ಟ್ 24ರಂದು ರೆಕಾರ್ಡ್ ಮಾಡಲಾಗಿದ್ದ ಹಬಿಬುರ್ ರೆಹಮಾನ್ ಅವರ ಹೇಳಿಕೆಯನ್ನು ಹೋಲುತ್ತದೆ’ ಎಂದು ವೆಬ್‌ಸೈಟಿನ ಮಾಹಿತಿ ತಿಳಿಸಿದೆ. ‘ನೇತಾಜಿ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ನಮ್ಮ ವೆಬ್‌ಸೈಟ್ ವಿರುದ್ಧ ಏನಾದರೂ ಹೇಳಿದರೆ ನನಗೆ ಆಶ್ಚರ್ಯವಾಗುತ್ತದೆ’ಎಂದು ವೆಬ್‌ಸೈಟ್‌ನ ಸ್ಥಾಪಕ ಅಶಿಸ್ ರೇ ಹೇಳಿದ್ದಾರೆ. ಈಗ ಜರ್ಮನಿಯಲ್ಲಿ ವಾಸಿಸುತ್ತಿರುವ ನೇತಾಜಿ ಅವರ ಮಗಳು ಅನಿತಾ ಫಫ್ಪ್‌ ಅವರು ದಾಖಲೆಗಳನ್ನು ಪರಿಶೀಲಿಸಿದ್ದು, ನೇತಾಜಿ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವುದು ಸತ್ಯ ಎಂದು ಹೇಳಿದ್ದಾರೆ.

ವೆಬ್‌ಸೈಟ್‌ ಒದಗಿಸಿರುವ ಮಾಹಿತಿ
ವೆಬ್‌ಸೈಟ್‌ ಒದಗಿಸಿರುವ ಪುರಾವೆ ಪ್ರಕಾರ, ನೇತಾಜಿ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಬ್ರಿಟನ್‌ ವಿದೇಶಾಂಗ ಕಚೇರಿಗೆ ತೈವಾನ್ ಪೊಲೀಸರು ವರದಿ ಸಲ್ಲಿಸಿದ್ದರು. ನಂತರ ಈ ವರದಿ ಬ್ರಿಟನ್ ಹೈಕಮಿಷನರ್ ಮೂಲಕ 1956ರ ಜುಲೈನಲ್ಲಿ ಭಾರತ ಸರ್ಕಾರಕ್ಕೆ ತಲುಪಿತ್ತು.

ನೇತಾಜಿ ಸಾವಿಗೆ ಸಂಬಂಧಿಸಿದಂತೆ 1956ರ ಮೇ 15ರಂದು, ತೈವಾನ್‌ ನಲ್ಲಿರುವ ಬ್ರಿಟನ್ ರಾಯಭಾರಿ ಆಲ್ಬರ್ಟ್‌ ಫ್ರಾಂಕ್ಲಿನ್ ಅವರು ತೈವಾನ್‌ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪತ್ರಕ್ಕೆ ಪ್ರತಿಕ್ರಿಯಿಸಿ ತೈವಾನ್‌ ಪ್ರಾಂತ್ಯದ ಗವರ್ನರ್ ಸಿ.ಕೆ. ಯೆನ್ ಅವರು 1956ರ ಜೂನ್‌ 27ರಂದು ಪೊಲೀಸರ ವರದಿಯನ್ನು ಬ್ರಿಟನ್‌ಗೆ ಕಳುಹಿಸಿದ್ದರು.

ಈ ವರದಿಯಲ್ಲಿ ತೈವಾನ್ ಅಧಿಕಾರಿ ಟನ್‌ ಟಿಟಿ 1945ರ ಆಗಸ್ಟ್‌ 22ರಂದು ನೇತಾಜಿ ಅವರ ಅಂತ್ಯಕ್ರಿಯೆ ನಡೆಸಿದ್ದ ಮಾಹಿತಿ ಇತ್ತು. ಇದೇ ವರದಿಯನ್ನು ಬ್ರಿಟನ್‌ ಭಾರತಕ್ಕೆ ನೀಡಿತ್ತು ಎಂದು ಟನ್‌ ಟಿ ಟಿ ಅವರ ಸಂದರ್ಶನ ಪ್ರಕಟಿಸಿರುವ ವೆಬ್‌ಸೈಟ್‌ ತಿಳಿಸಿದೆ.

*
23ಕ್ಕೆ ನೇತಾಜಿ  ಕಡತ ಬಹಿರಂಗ?
ನವದೆಹಲಿ (ಪಿಟಿಐ): ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಸಂಬಂಧಿಸಿದ ಕೆಲವು ರಹಸ್ಯ ಕಡತಗಳನ್ನು ಅವರ ಜನ್ಮದಿನವಾದ ಜನ ವರಿ 23ರಂದು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. ‘ನೇತಾಜಿ ಕುಟುಂಬ ಸದಸ್ಯರಿಗೆ ನೀಡಿದ ಭರವಸೆಯಂತೆ ಇದೇ 23 ರಂದು ಕಡತ ಬಹಿರಂಗವಾಗಲಿದೆ’ ಎಂದು ಕೇಂದ್ರ ಪ್ರವಾಸೊದ್ಯಮ ಮತ್ತು ಸಂಸ್ಕೃತಿ ಸಚಿವ  ಮಹೇಶ್‌ ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.