ಕಾಬೂಲ್ (ಎಪಿ/ಐಎಎನ್‌ಎಸ್/ಕ್ಸಿನ್‌ಹುವಾ): ಭಾರಿ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಅವರ ಅಧಿಕೃತ ನಿವಾಸದೊಳಗೆ ಸ್ಫೋಟಕಗಳನ್ನು ಹೊಂದಿದ್ದ ವಾಹನದೊಂದಿಗೆ ನುಗ್ಗಲು ಯತ್ನಿಸಿದ ನಾಲ್ವರು ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರನ್ನು ಮಂಗಳವಾರ ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ. ಆ ಮೂಲಕ ಅಧ್ಯಕ್ಷರ ಅರಮನೆ ಮೇಲೆ ನಡೆಯಬಹುದಾಗಿದ್ದ ಸಂಭಾವ್ಯ ದಾಳಿ ಮತ್ತು ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಸ್ಥಳೀಯ ಕಾಲಮಾನ ಬೆಳಗಿನ ಜಾವ 6.30 ಗಂಟೆಗೆ ಉಗ್ರರು ಪಶ್ಚಿಮ ದ್ವಾರದ ಮೂಲಕ ಅಧ್ಯಕ್ಷರ ಭವನ ಪ್ರವೇಶಿಸಲು ಯತ್ನಿಸಿದರು. ನಕಲಿ ಗುರುತಿನ ಪತ್ರಗಳ ನೆರವಿನಿಂದ ಮೊದಲ ದ್ವಾರವನ್ನು ಪ್ರವೇಶಿಸಲು ಯಶಸ್ವಿಯಾದ ಉಗ್ರರನ್ನು ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆಗೊಳಪಡಿಸಿದ ಸಂದರ್ಭದಲ್ಲಿ ಕ್ಷಿಪಣಿ ಮೂಲಕ ದಾಳಿ ನಡೆಸಿದರು. ಇದೇ ಕಾಲಕ್ಕೆ ಭಾರಿ ಸ್ಫೋಟಕಗಳನ್ನು ಹೊತ್ತು ತಂದಿದ್ದ ಕಾರನ್ನು ಸ್ಫೋಟಿಸಿದರು.
ತಾಲಿಬಾನ್ ಈ ದಾಳಿ ಹೊಣೆಯನ್ನು ಹೊತ್ತಿದೆ. ದಾಳಿಯ ವೇಳೆ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಭಾರಿ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರು ಹತರಾದರು. ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಅಥವಾ ನಾಗರಿಕರಿಗೆ ಯಾವುದೇ ಹಾನಿಯಾದ ವರದಿಯಾಗಿಲ್ಲ.
ಅಧ್ಯಕ್ಷರ ಭವನದ ಪಶ್ಚಿಮ ದ್ವಾರದ ಬಳಿ 12 ಸ್ಫೋಟಗಳು ಸಂಭವಿಸಿದ್ದು, ಭಾರಿ ದಟ್ಟವಾದ ಹೊಗೆ ಆವರಿಸಿತ್ತು. ಈ ಘಟನೆ ನಡೆದಾಗ ಕರ್ಜೈ ಅವರು ನಿವಾಸದಲ್ಲಿ ಇದ್ದರೇ ಇಲ್ಲವೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಅಧ್ಯಕ್ಷರ ಅರಮನೆ ಇರುವ ಆವರಣದಲ್ಲಿಯೇ ನ್ಯಾಟೊ ಪಡೆ, ಅಮೆರಿಕ ರಾಯಭಾರ ಕಚೇರಿ, ಬೇಹುಗಾರಿಕಾ ಸಂಸ್ಥೆಯ ಕಚೇರಿ ಹಾಗೂ ಆಫ್ಘಾನಿಸ್ತಾನದ ರಕ್ಷಣಾ ಸಚಿವಾಲಯಗಳಿವೆ. ಹೀಗಾಗಿ ಈ ಪ್ರದೇಶಕ್ಕೆ ಭಾರಿ ಭದ್ರತೆ ಕಲ್ಪಿಸಲಾಗಿದೆ.
ತಾಲಿಬಾನ್ ಜೊತೆ ಸ್ಥಗಿತಗೊಂಡಿರುವ ಶಾಂತಿ ಮಾತುಕತೆಗೆ ಚಾಲನೆ ನೀಡುವ ಉದ್ದೇಶದಿಂದ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಲು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ವ್ಯವಹಾರ ನೋಡಿಕೊಳ್ಳುತ್ತಿರುವ ಅಮೆರಿಕದ ವಿಶೇಷ ರಾಯಭಾರಿ ಜೇಮ್ಸ ಡಾಬಿನ್ಸ್ ಮಂಗಳವಾರ ಇಲ್ಲಿಗೆ ಭೇಟಿ ನೀಡುವವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.