ADVERTISEMENT

ಆರು ವರ್ಷದ ಬಳಿಕ ಪಾಕ್‌ಗೆ ಮಲಾಲ

ಪಿಟಿಐ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಮಲಾಲ
ಮಲಾಲ   

ಇಸ್ಲಾಮಾಬಾದ್: ಸುಮಾರು ಆರು ವರ್ಷಗಳ ಬಳಿಕ ಗುರುವಾರ ತವರಿಗೆ ವಾಪಸಾದ ನೊಬಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್‌ಜೈ (20) ಅವರಿಗೆ ಪಾಕಿಸ್ತಾನದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.

ಹೆಣ್ಣುಮಕ್ಕಳ ಶಿಕ್ಷಣದ ಪರ ದನಿ ಎತ್ತಿದ ಕಾರಣಕ್ಕೆ 2012ರಲ್ಲಿ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರರು ಮಲಾಲ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ಅವರಿಗೆ 14 ವರ್ಷ ವಯಸ್ಸಿತ್ತು.

ಪಾಕಿಸ್ತಾನಿ ಸಲ್ವಾರ್ ಕಮೀಜ್ ಹಾಗೂ ದುಪಟ್ಟಾ ಧರಿಸಿದ ಮಲಾಲ ತನ್ನ ಪೋಷಕರ ಜೊತೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರ ಮುಖದಲ್ಲಿ ಸಂತಸವಿತ್ತು. ಬಿಗಿ ಭದ್ರತೆಯಲ್ಲಿ ಅವರನ್ನು ಕರೆತರಲಾಯಿತು. ಪ್ರಧಾನಿ ಶಾಹಿದ್ ಅಬ್ಬಾಸಿ ಅವರ ಜೊತೆ ಮಲಾಲ ಮಾತುಕತೆ ನಡೆಸಿದರು. ಭದ್ರತಾ ದೃಷ್ಟಿಯಿಂದ ಅವರ ನಾಲ್ಕು ದಿನಗಳ ಭೇಟಿಯ ವಿವರಗಳನ್ನು ಗೋಪ್ಯವಾಗಿರಿಸಲಾಗಿದೆ.

ADVERTISEMENT

‘ಗುಲ್ ಮಕೈ’ಗೆ (ಪ್ರಸಿದ್ಧ ಜನಪದ ಕಥೆಯೊಂದರ ನಾಯಕಿ) ಪಾಕಿಸ್ತಾನ ಸ್ವಾಗತ ಕೋರುತ್ತದೆ ಎಂದು ಪಾಕ್ ವಿದೇಶಾಂಗ ವಕ್ತಾರ ಮುಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.

ಶಾಲೆಯಿಂದ ವಾಪಸಾಗುವಾಗ ದಾಳಿಗೊಳಗಾದ ಸ್ವಾತ್ ಕಣಿವೆ ಪ್ರದೇಶಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿಯಿಲ್ಲ. ‘ಮೀಟ್ ದಿ ಮಲಾಲ’ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ತಲುಪಿದ್ದ ಮಲಾಲ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಲಂಡನ್‌ಗೆ ಕಳುಹಿಸಲಾಗಿತ್ತು. ಮಲಾಲ ಬದುಕುಳಿದರೆ, ಅವರ ಮೇಲೆ ಮತ್ತೆ ದಾಳಿ ಮಾಡುವುದಾಗಿ ತಾಲಿಬಾನ್ ಬೆದರಿಕೆ ಹಾಕಿತ್ತು. ಮಲಾಲ ಸದ್ಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. 2014ರಲ್ಲಿ ಅವರಿಗೆ ಶಾಂತಿ ನೊಬೆಲ್ ಸಂದಿತ್ತು. ಭಾರತದ ಕೈಲಾಶ್ ಸತ್ಯಾರ್ಥಿ ಜೊತೆ ಅವರು ಪ್ರಶಸ್ತಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.