ADVERTISEMENT

ಆಸ್ಟ್ರೇಲಿಯಾ ಪಕ್ಷಿಗಳಿಗೆ ಭಾರತದ ಮೈನಾ ಕಂಟಕ!

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಮೆಲ್ಬರ್ನ್ (ಪಿಟಿಐ): ಉದ್ಯಾನಗಳಲ್ಲಿ ಹೆಚ್ಚಾಗಿದ್ದ ಕೀಟಗಳ ಹಾವಳಿ ತಡೆಗಟ್ಟಲು ಒಂದೂವರೆ ಶತಮಾನದ ಹಿಂದೆ ಆಸ್ಟ್ರೇಲಿಯಾಕ್ಕೆ ತರಲಾಗಿದ್ದ ಭಾರತೀಯ ಮೂಲದ ಮೈನಾ (ಗೊರವಂಕ) ಹಕ್ಕಿ ಇದೀಗ ಇಲ್ಲಿನ ಸಿಗ್ನೇಚರ್ ಜಾತಿಗೆ ಸೇರಿದ ಪಕ್ಷಿ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ.

ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯ ಮತ್ತು ಆಕ್ರಮಣಕಾರಿ ಪ್ರಾಣಿಗಳ ಸಂಶೋಧನಾ ಕೇಂದ್ರದ ತಂಡಗಳು ಜಂಟಿಯಾಗಿ ನಡೆಸಿದ ಅಧ್ಯಯನ ವರದಿ ಪಕ್ಷಿ ಪ್ರಿಯರಲ್ಲಿ ಆತಂಕ ಮೂಡಿಸುವ ಅಂಶವನ್ನು ಬಹಿರಂಗಗೊಳಿಸಿದೆ.

ಸಿಗ್ನೇಚರ್ ಜಾತಿಗೆ ಸೇರಿದ ನಗುವ ಕೂಕಾಬುರ‌್ರಾ, ಕಡುಗೆಂಪು ಬಣ್ಣದ ರೊಸೆಲ್ಲಾ ಮತ್ತು ಕಾಕ್‌ಟೂ ಎಂಬ ಪಕ್ಷಿಗಳು ಮೈನಾದಿಂದಾಗಿ ಅಪಾಯವನ್ನು ಎದುರಿಸುತ್ತಿವೆ. ಇತ್ತೀಚಿನ ಕೆಲವು ವರ್ಷಗಳಿಂದ ಈ ಜಾತಿಯ ಹಕ್ಕಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಸಂಶೋಧಕರ ತಂಡ ಪತ್ತೆ ಹಚ್ಚಿದೆ.

ಆಹಾರ ಮತ್ತು ಗೂಡು ಕಟ್ಟಲು ಸೂಕ್ತ ಜಾಗದ ಹುಡುಕಾಟದಂತಹ ವಿಷಯಗಳಲ್ಲಿ ಆಕ್ರಮಣಕಾರಿ ಮನೋಭಾವದ ಮೈನಾ ಹಕ್ಕಿಯ ಪೈಪೋಟಿ ಎದುರಿಸಲಾಗದೆ ಸೋಲುತ್ತಿವೆ. ಬೂದು ಬಣ್ಣದ ಫ್ಯಾನ್‌ಟೇಲ್, ವಿಲ್ಲಿ ವ್ಯಾಗ್‌ಟೇಲ್, ಮ್ಯಾಗ್‌ಪೈ ಲಾರ್ಕ್ ಮತ್ತು ಬೆಳ್ಳಿಕಣ್ಣಿನ ಹಕ್ಕಿಗಳಂಥ ಪುಟ್ಟ ಪಕ್ಷಿಗಳೂ ಕಣ್ಮರೆಯಾಗುತ್ತಿವೆ. ಈ ಆತಂಕಕಾರಿ ಬೆಳವಣಿಗೆಗೆ ಭಾರತೀಯ ಮೂಲದ ಮೈನಾ ಹಕ್ಕಿಯೇ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ದಕ್ಷಿಣ ಮತ್ತು ಈಶಾನ್ಯ ಏಷ್ಯಾ, ಅದರಲ್ಲೂ ಉತ್ತರ ಭಾರತದಲ್ಲಿ ಹೇರಳವಾಗಿರುವ ಮೈನಾ ಹಕ್ಕಿಗಳನ್ನು 1862ರಲ್ಲಿ ಆಸ್ಟ್ರೇಲಿಯಾಕ್ಕೆ ತರಲಾಗಿತ್ತು. 1968- 71ರಲ್ಲಿ ಕ್ಯಾನ್‌ಬೆರಾಕ್ಕೆ ಮೈನಾ ಬಂದ ನಂತರ ಸುತ್ತಮುತ್ತ ಹೆಚ್ಚಾಗಿದ್ದ ಕೂಕಾಬುರ‌್ರಾ, ರೊಸೆಲ್ಲಾ, ಕಾಕ್‌ಟೂ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಸದ್ಯ ಕ್ಯಾನ್‌ಬೆರಾ ನಗರದಾದ್ಯಂತ 93 ಸಾವಿರಕ್ಕೂ ಹೆಚ್ಚು ಮೈನಾ ಹಕ್ಕಿಗಳಿರುವುದನ್ನು ತಂಡ ಪತ್ತೆ ಮಾಡಿದೆ.

ಈ ಎಲ್ಲ ಬೆಳವಣಿಗೆಗೆ ವ್ಯತಿರಿಕ್ತವಾಗಿ ಆಸ್ಟ್ರೇಲಿಯಾಕ್ಕೆ ಮೈನಾ ಆಗಮನದ ನಂತರ ದೊಡ್ಡ ಗಿಳಿ, ಹಲಹ, ಈಶಾನ್ಯ ರೊಸೆಲ್ಲಾದಂಥ ಪಕ್ಷಿಗಳ ಸಂಖ್ಯೆ ವೃದ್ಧಿಯಾಗಿದೆ ಎಂಬ ಸಮಾಧಾನಕರ ವಿಷಯವನ್ನೂ ವರದಿ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.