ADVERTISEMENT

ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 16:35 IST
Last Updated 14 ಮಾರ್ಚ್ 2011, 16:35 IST
ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ
ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ   

 ಮೆಲ್ಬರ್ನ್ (ಪಿಟಿಐ): ಭಾರತೀಯ ಮೂಲದ 24 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯ ನಂತರ ಆಕೆ ದೇಹವನ್ನು ಸೂಟ್‌ಕೇಸ್ ಒಂದರಲ್ಲಿ ಇರಿಸಿ ಸಿಡ್ನಿ ಸಮೀಪದ ಕಾಲುವೆಯಲ್ಲಿ ಎಸೆಯಲಾಗಿದೆ.

ನತದೃಷ್ಟ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ತೋಷಾ ಠಕ್ಕರ್ ಎಂದು ಗುರುತಿಸಲಾಗಿದೆ. ಮಾರ್ಚ್ 9ರ ನಂತರ ಆಕೆ ನಾಪತ್ತೆಯಾಗಿದ್ದಳು.

ಆಸ್ಟ್ರೇಲಿಯಾದ ಕಾಯಂ ನಿವಾಸಿ ಆಗಿದ್ದ ತೋಷಾ ಠಕ್ಕರ್ ಗುಜರಾತ್ ಮೂಲದವಳು. ಸಿಡ್ನಿಯ ವ್ಯವಹಾರ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಅಕೌಂಟಿಂಗ್ ಕಲಿಯುತ್ತಿದ್ದಳು.

‘ಸಿಡ್ನಿಯ ಮೀಡೊವ್‌ಬ್ಯಾಂಕ್ ಉದ್ಯಾನದ ಸಮೀಪದ ಕಾಲುವೆಯಲ್ಲಿ ಮಹಿಳೆಯ ದೇಹವನ್ನು ಹೊಂದಿದ್ದ ಸೂಟ್‌ಕೇಸ್ ಇರುವುದು ಮಾರ್ಚ್ 11 ರಂದು ಕಟ್ಟಡ ನಿರ್ಮಾಣ ಕೆಲಸಗಾರರ ಕಣ್ಣಿಗೆ ಬಿತ್ತು’ಎಂದು  ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ಈಗ ವಿದ್ಯಾರ್ಥಿನಿಯ ಶವ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಆಕೆ ಹೇಗೆ ಮೃತಪಟ್ಟಳು ಎಂಬುದು ತಿಳಿಯಲಿದೆ.

ಯಾಕೆ ತೋಷಾಳನ್ನು ಕೊಲ್ಲಲಾಯಿತು ಎಂಬುದರ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ವಿದ್ಯಾರ್ಥಿನಿಯ ಕುಟುಂಬದವರು, ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಂಧನ: ಈ ಮಧ್ಯೆ, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷ ವಯಸ್ಸಿನ ಡೇನಿಯಲ್ ಸ್ಟ್ಯಾನಿ-ರೆಗಿನಾಲ್ಡ್ ಎಂಬಾತನನ್ನು ಪತ್ತೇಧಾರಿ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಆತನ ವಿರುದ್ಧ ಕೊಲೆ ಮತ್ತು ಲೈಂಗಿಕ ಹಲ್ಲೆ ನಡೆಸಿದ ಆರೋಪಗಳನ್ನು ಹೊರಿಸಲಾಗಿದೆ.

ಠಕ್ಕರ್ ವಾಸಿಸುತ್ತಿದ್ದ ಸಿಡ್ನಿ ಹೊರವಲಯದ ಕ್ರೊಯ್ಡೋನ್ ಪ್ರದೇಶದ ಸಮೀಪವೇ ನೆಲೆಸಿದ್ದ ಸ್ಟ್ಯಾನಿಯನ್ನು ಕಳೆದ ವಾರಾಂತ್ಯದಲ್ಲಿ ಹೋಟೆಲ್ ಒಂದರಲ್ಲಿ ಬಂಧಿಸಲಾಗಿದ್ದು,  ಭಾನುವಾರ ಆತನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ ಎಂದು ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.
ಆತನಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.