ADVERTISEMENT

ಇನ್ನಿಬ್ಬರು ಪೋಲಿಯೊ ಕಾರ್ಯಕರ್ತರ ಬಲಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಾಯೋಜಿತ ಪೋಲಿಯೊ ತಡೆ ಲಸಿಕೆ ಆಂದೋಲನದ ಕಾರ್ಯಕರ್ತರ ಮೇಲೆ ಕಳೆದ ಎರಡು ದಿನಗಳಿಂದ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಿದ್ದು, ಬುಧವಾರ ಇನ್ನಿಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಕರಾಚಿ ಮತ್ತು ಪೇಶಾವರದಲ್ಲಿ ಐವರು ಮಹಿಳಾ ಕಾರ್ಯಕರ್ತರು ಬಲಿಯಾಗಿದ್ದರು.
ಪೇಶಾವರ, ಚರ್‌ಸಡ್ಡ, ನೌಷೇರಾದಲ್ಲಿ ಪೋಲಿಯೊ ಕಾರ್ಯಕರ್ತರ ವಿರುದ್ಧ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚರ್‌ಸಡ್ಡಾ ಶಬ್‌ಕದಾರ್ ಪ್ರಾಂತ್ಯದಲ್ಲಿ ವಾಹನವೊಂದರ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ ಪರಿಣಾಮ ಮಹಿಳಾ ಅಧಿಕಾರಿ ಹಾಗೂ ಚಾಲಕ ಮೃತಪಟ್ಟರು.

ನೌಶೇರಾ ಮತ್ತು ಪೇಶಾವರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಐವರು ಗಾಯಗೊಂಡಿದ್ದಾರೆ. ಪೇಶಾವರದ ದೌಡ್‌ಜಾಯ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕಾರ್ಯಕರ್ತನೊಬ್ಬ ಗಾಯಗೊಂಡ್ದ್ದಿದ್ದಾನೆ.

ಈವರೆಗೆ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ಪೋಲಿಯೊ ಲಸಿಕೆ ಕಾರ್ಯಕರ್ತೆಯರಿಗೆ ಪಾಕಿಸ್ತಾನದ ನಿಷೇಧಿತ ತಾಲಿಬಾನ್ ಸಂಘಟನೆ ಬೆದರಿಕೆ ಹಾಕಿದೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಲಸಿಕೆ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ವಿಶ್ವ ಆರೋಗ್ಯ ಸಂಘಟನೆ ಮತ್ತು ಯುನಿಸೆಫ್ ತಿಳಿಸಿದ್ದು, ಕಾರ್ಯಕರ್ತರಿಗೆ ರಕ್ಷಣೆ  ಒದಗಿಸುವಲ್ಲಿ ಸರ್ಕಾರ ಬದ್ಧವಾಗಿರಬೇಕು ಎಂದು ಕೋರಿದೆ.

ಪೋಲಿಯೊ ಲಸಿಕೆ ಹಾಕುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು ಎನ್ನುವುದು ಉಗ್ರ ಸಂಘಟನೆಗಳ ಆರೋಪವಾಗಿದೆ.
ಖಂಡನೆ: ಪಾಕಿಸ್ತಾನದಲ್ಲಿ ಪೋಲಿಯೊ ಲಸಿಕೆ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಗುಂಡಿನ ದಾಳಿಯನ್ನು ಅಮೆರಿಕ ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.