ADVERTISEMENT

ಇರಾಕ್‌ನಲ್ಲಿ ಸರಣಿ ಬಾಂಬ್ ಸ್ಫೋಟ: 53 ಜನರ ಸಾವು

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಬಾಗ್ದಾದ್ (ಎಪಿ/ಎಎಫ್‌ಪಿ): ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಗುರುವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
 ಶಿಯಾ ಪಂಗಡದ ಮುಸ್ಲಿಮರು ವಾಸಿಸುವ ಎರಡು ಪ್ರದೇಶಗಳ ಸುತ್ತಮುತ್ತಲಿನಲ್ಲಿ ಒಟ್ಟು ಐದು ಸ್ಫೋಟಗಳು ಸಂಭವಿಸಿವೆ.

ಅಮೆರಿಕ ತನ್ನ ಪಡೆಯನ್ನು ಇರಾಕ್‌ನಿಂದ ವಾಪಸು ಕರೆಯಿಸಿಕೊಂಡ ಒಂದು ತಿಂಗಳಲ್ಲೇ ಈ ಸ್ಫೋಟ ಸಂಭವಿಸಿರುವುದರಿಂದ ಬಂಡುಕೋರರ ಚಟುವಟಿಕೆ  ಮತ್ತೆ ಆರಂಭವಾಗಿದೆಯೇ ಎಂಬ ಆತಂಕ ಆ ರಾಷ್ಟ್ರದಲ್ಲಿ ಕಾಡತೊಡಗಿದೆ.

ನಸಿರಿಯ್ಹಾ ಪಟ್ಟಣದ ಹೊರಭಾಗದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು, 72 ಜನರು ಗಾಯಗೊಂಡಿದ್ದಾರೆ.

ಬಾಗ್ದಾದ್‌ನ ಉತ್ತರ ಭಾಗದಲ್ಲಿ ನಡೆದ ಎರಡು ಸ್ಫೋಟಗಳಲ್ಲಿ  23 ಮಂದಿ ಬಲಿಯಾಗಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವುದಕ್ಕೆ ಅಮೆರಿಕ ಪಡೆಗಳು ವಾಪಸಾದ ನಂತರ ಸುನ್ನಿ ಮತ್ತು ಶಿಯಾ ಪಂಗಡಗಳ ಬಂಡುಕೋರರ ಚಟುವಟಿಕೆ ಹೆಚ್ಚಳವಾಗಿರುವುದೇ ಕಾರಣ ಎಂದು ಇರಾಕ್ ಮುಖಂಡರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.