ADVERTISEMENT

ಇರಾನ್, ಕೊಲ್ಲಿ, ದಕ್ಷಿಣ ಏಷ್ಯಾ ಗಡಗಡ: 40ಕ್ಕೂ ಹೆಚ್ಚು ಸಾವು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 12:51 IST
Last Updated 16 ಏಪ್ರಿಲ್ 2013, 12:51 IST

ಟೆಹರಾನ್/ ನವದೆಹಲಿ/ ಇಸ್ಲಾಮಾಬಾದ್ (ಎಎಫ್ ಪಿ, ಪಿಟಿಐ, ಐಎಎನ್ ಎಸ್): ಆಗ್ನೇಯ ಇರಾನ್, ಕೊಲ್ಲಿ ವಲಯ ಮತ್ತು  ದಕ್ಷಿಣ ಏಷ್ಯಾ ಪ್ರದೇಶಗಳನ್ನು ಪ್ರಬಲ ಭೂಕಂಪನವು ಇಂದು ಗಡ ಗಡ ನಡುಗಿಸಿದ್ದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇರಾನ್ ನಲ್ಲಿ 40ಕ್ಕೂ ಹೆಚ್ಚು ಜನ ಮೃತರಾಗಿ ನೂರಾರು ಮಂದಿ ಗಾಯಗೊಂಡಿದ್ದರೆ, ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಐವರು ಮೃತರಾಗಿ ಹಲವರು ಗಾಯಗೊಂಡಿದ್ದಾರೆ.

ಇರಾನ್ ಭೂಕಂಪನ ಕೇಂದ್ರವು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ ಪ್ರಕಾರ ಮಧ್ಯಾಹ್ನ 3.14ರ ವೇಳೆಗೆ (ಭಾರತೀಯ ಕಾಲಮಾನ 4.14) ರಿಕ್ಟರ್ ಮಾಪಕದಲ್ಲಿ 7.5 ಪ್ರಮಾಣದ ಭೂಕಂಪನ ಸಂಭವಿಸಿದೆ. ಟೆಹರಾನ್ ಗೆ 80 ಕಿ.ಮೀ. ದೂರದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಗಡಿಯಲ್ಲಿ ಈ ಭೂಕಂಪನ ಸಂಭವಿಸಿತು ಎಂದು ವರದಿ ಹೇಳಿದೆ.

ಭೂಕಂಪನದ ಪರಿಣಾಮವಾಗಿ ಅಬುಧಾಬಿ, ಸಂಯುಕ್ತ ಅರಬ್ ಅಮೀರ ರಾಷ್ಟ್ರದಲ್ಲಿ ಗಗನ ಚುಂಬಿ ಕಟ್ಟಡಗಳು ನಡುಗಿದವು. ತತ್ ಕ್ಷಣವೇ ಜನರನ್ನು ಬೇರೆ ಸುರಕ್ಷಿತ ಕಡೆಗಳಿಗೆ ಸ್ಥಳಾಂತರಿಸಬೇಕಾಯಿತು. ರಾಜಧಾನಿ ನವದೆಹಲಿ ಸೇರಿದಂತೆ ಉತ್ತರಭಾರತದಾದ್ಯಂತವೂ ಭೂಮಿ ಕಂಪಿಸಿ ಕಚೇರಿ ಹಾಗೂ ಮನೆಗಳಿಂದ ಜನ ದಿಕ್ಕಾಪಾಲಾಗಿ ಹೊರಗೋಡಿದರು.

ಅಮೆರಿಕದ ಭೂಕಂಪನ ಸಮೀಕ್ಏ ಕೇಂದ್ರದ ವೆಬ್ ಸೈಟ್ ಪ್ರಕಾರ ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.8 ಗಾತ್ರದಲ್ಲಿತ್ತು. ಭೂಕಂಪನವು ಇರಾನಿನ ನಗರವಾದ ಖಾಷ್, ಸಿಸ್ಟಾನ್ ಬಲೂಚಿಸ್ತಾನದ ಆಗ್ನೇಯಭಾಗವನ್ನು ಈ ಕಂಪನ ತಲ್ಲಣಗೊಳಿಸಿತು ಎಂದು ವೆಬ್ ಸೈಟ್ ಹೇಳಿದೆ.

ಭೂಕಂಪನ ತ್ರಸ್ತ ಪ್ರದೇಶಗಳಿಗೆ ಜನರನ್ನು ಸ್ಥಳಾಂತರಗೊಳಿಸುವ ಸಲುವಾಗಿ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ ಎಂದು ಇರಾನ್ ನ ರೆಡ್ ಕ್ರೆಸೆಂಟ್ ಮುಖ್ಯಸ್ಥ ಮೊಹಮ್ಮದ್ ಮೊಝಾಫರ್ ಇಸ್ನಾ ಸುದ್ದಿ ಸಂಸ್ಥೆಗೆ ತಿಳಿಸಿದರು.

ಪಾಕಿಸ್ತಾನದಲ್ಲಿ ಇಸ್ಲಾಮಾಬಾದ್ ಸೇರಿದಂತೆ ಬಹುತೇಕ ಭಾಗಗಳಲ್ಲಿ ಭೂಮಿ ನಡುಗಿದ್ದು ಕಟ್ಟಡಗಳು ಅಲುಗಾಡಿದವು. ಕರಾಚಿಯಲ್ಲಿ ನೂರಾರು ಮಂದಿ ರಸ್ತೆಗಳಿಗೆ ಓಡಿದರು.

ಭಾರತದಲ್ಲಿ ರಾಜಧಾನಿ ದೆಹಲಿ ಹಾಗೂ ಆಸುಪಾಸಿನ ಪ್ರದೇಶಗಳು, ಗುಜರಾತಿನ ಅಹಮದ್ ನಗರ, ದಕ್ಷಿಣ ಗುಜರಾತಿನ ಕಛ್, ಅಸ್ಸಾಂ, ಪಂಜಾಬ್, ಹರಿಯಾಣ, ಚಂಡೀಗಢ, ಒಡಿಶಾ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್ ಪ್ರದೇಶಗಳಲ್ಲೂ ಭೂಕಂಪನ ಸಂಭವಿಸಿದ ವರದಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.