ADVERTISEMENT

ಇಸ್ಲಾಂಗೆ ಬಲವಂತದ ಮತಾಂತರ: ಪಾಕ್‌ನಿಂದ ಹಿಂದೂಗಳ ಪಲಾಯನ?

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ಇಸ್ಲಾಮಾಬಾದ್ (ಐಎಎನ್‌ಎಸ್/ಪಿಟಿಐ):   ಬಲವಂತದ ಮತಾಂತರ, ಅಪಹರಣ ಹಾಗೂ ಅಂಗಡಿಗಳ ಲೂಟಿಯಂತಹ ಕೃತ್ಯಗಳಿಂದ ಭಯಭೀತರಾಗಿರುವ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳು ದೇಶ  ತೊರೆದು ಭಾರತದತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ವರದಿಗಳ ಹಿನ್ನೆಲೆಯಲ್ಲಿ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಭಾರತಕ್ಕೆ ತೆರಳಲು ಸಿದ್ಧರಾಗಿದ್ದ ಹಿಂದೂಗಳನ್ನು ಶುಕ್ರವಾರ ವಾಘಾ ಗಡಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳು ತಡೆದ ಘಟನೆ ನಡೆದಿದೆ.

ಸಿಂಧ್ ಹಾಗೂ ಬಲೂಚಿಸ್ತಾನ ಪ್ರಾಂತದ ಸುಮಾರು 250 ಜನ ಹಿಂದೂಗಳು ಶುಕ್ರವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಭಾರತಕ್ಕೆ ತೆರಳಲು ವಾಘಾ ಗಡಿ ತಲುಪಿದರಾದರೂ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ಗಡಿಯಲ್ಲಿ ತಡೆದರು.

ADVERTISEMENT

ತಮಗೆ ಗಡಿ ದಾಟಲು ಅವಕಾಶ ನೀಡದೇ ಇರುವುದಕ್ಕೆ ಹಾಗೂ ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದಕ್ಕೆ ಈ ಗುಂಪು ಪ್ರತಿಭಟನೆ ನಡೆಸಿತು. ಅಂತಿಮವಾಗಿ ಮಧ್ಯಾಹ್ನ 2.30ಕ್ಕೆ ಇವರಿಗೆ ಗಡಿ ದಾಟಲು ಅನುಮತಿ ನೀಡಲಾಯಿತು.

`ಒಳಾಡಳಿತ ಸಚಿವಾಲಯದಿಂದ ಹಿಂದೂಗಳನ್ನು ಭಾರತಕ್ಕೆ ಕಳುಹಿಸಲು ಸೂಚನೆ ದೊರಕಿದ ಬಳಿಕ ನಾವು ಹಸಿರು ನಿಶಾನೆ ತೋರಿದೆವು. ಅವರ ಬಳಿ ಸಮರ್ಪಕವಾದ ದಾಖಲೆ ಪತ್ರಗಳಿವೆ~ ಎಂದು ಲಾಹೋರ್‌ನ ಫೆಡರಲ್ ತನಿಖಾ ಸಂಸ್ಥೆಯ (ಎಫ್‌ಐಎ) ಅಧಿಕಾರಿಯೊಬ್ಬರು ತಿಳಿಸಿದರು.

`ಈ ಹಿಂದೂಗಳ ಬಳಿ ಭಾರತದ ವಿವಿಧ ಸ್ಥಳಗಳಿಗೆ ತೆರಳಲು 33 ದಿನಗಳ ವೀಸಾ ಇದೆ. ಕೆಲ ಸಮಸ್ಯೆಗಳಿಂದಾಗಿ ಅವರು ಪಾಕ್‌ಗೆ ವಾಪಸಾಗುವುದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದರಿಂದ ಅವರನ್ನು ಗಡಿಯಲ್ಲಿ ತಡೆಯಲಾಯಿತು. ನಾವು ಪಾಕಿಸ್ತಾನದ ವಿರುದ್ಧ ಅಪಪ್ರಚಾರ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರು. ಹಾಗೆಂದು ಹಿಂದೂ ಯಾತ್ರಿಕರಿಂದ ನಾವು ಯಾವುದೇ ಮುಚ್ಚಳಿಕೆ ಪತ್ರ ಬರೆಸಿಕೊಂಡಿಲ್ಲ~ ಎಂದೂ ಈ ಅಧಿಕಾರಿ ಹೇಳಿದರು.

ಹಿನ್ನೆಲೆ: ಸಿಂಧ್ ಪ್ರಾಂತ್ಯದ ಜಕೊಬಾಬಾದ್‌ನಿಂದ ಮಂಗಳವಾರ ಹಿಂದೂ ಯುವತಿ ಮನಿಷಾ ಕುಮಾರಿ ಎಂಬಾಕೆಯನ್ನು ಅಪಹರಿಸಲಾಗಿದೆ ಎಂಬ ವರದಿಯ ಕಾರಣ ಪಾಕಿಸ್ತಾನದ ಹಿಂದೂಗಳಲ್ಲಿ ಆತಂಕದ ಅಲೆ ಎದ್ದಿತ್ತು.
ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮತಾಂತರ ಯತ್ನ, ಹಿಂದೂ ವ್ಯಾಪಾರಿಗಳ ಲೂಟಿ ಇಂತಹ ಕಾರಣದಿಂದ ಜಕೊಬಾಬಾದ್‌ನ ಏಳು ಹಿಂದೂ ಕುಟುಂಬಗಳ 90 ಜನ ಭಾರತಕ್ಕೆ ವಲಸೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದೂ ಟಿವಿ ವಾಹಿನಿಗಳು ವರದಿ ಮಾಡಿದ್ದವು.

ಇದಕ್ಕೆ ಪ್ರತಿಕ್ರಿಯಿಸಿದ್ದ ಒಳಾಡಳಿತಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿ ಸಲಹೆಗಾರರಾಗಿರುವ ರೆಹಮಾನ್ ಮಲಿಕ್, `ಪಾಕಿಸ್ತಾನದ ಹೆಸರು ಕೆಡಿಸಲು ಇಂತಹ ಅಪಪ್ರಚಾರ ಮಾಡಲಾಗುತ್ತಿದೆ. ಫೆಡರಲ್ ತನಿಖಾ ಸಂಸ್ಥೆ ತಪಾಸಣೆ ಮಾಡಿದ ನಂತರವಷ್ಟೇ ಹಿಂದೂಗಳು ಭಾರತಕ್ಕೆ ತೆರಳಲು ಅನುಮತಿ ನೀಡಲಾಗುವುದು~ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.