ADVERTISEMENT

ಈಜಿಪ್ಟ್‌ನಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಕೈರೊ (ಪಿಟಿಐ): ಈಜಿಪ್ಟ್ ಮಾಧ್ಯಮಗಳು `ಸರ್ವಾಧಿಕಾರ ಬೇಡ' ಎಂಬ ತಲೆಬರಹದೊಂದಿಗೆ ಸುದ್ದಿ ಪ್ರಕಟಿಸುವ ಮೂಲಕ ಇಸ್ಲಾಂ ಪರ ಅಧ್ಯಕ್ಷ ಮೊಹಮದ್ ಮೊರ್ಸಿ ವಿರುದ್ಧ ಬಂಡಾಯವೆದ್ದಿರುವ ಜಾತ್ಯತೀತ ವಿರೋಧ ಪಕ್ಷಗಳಿಗೆ ಬೆಂಬಲ ವ್ಯಕ್ತಪಡಿಸಿವೆ.
ಹೊಸ್ನಿ ಮುಬಾರಕ್ ಅವರನ್ನು ಪದಚ್ಯುತಗೊಳಿಸಿದ ನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.

ವೊರ್ಸಿ ಅವರು ತುರ್ತು ಆದೇಶಗಳ ಮೂಲಕ ಕಳೆದ ತಿಂಗಳಿಂದ  ಸರ್ವಾಧಿಕಾರ ಚಲಾಯಿಸಲು ಆರಂಭಿಸಿದ್ದರಿಂದ ವಿರೋಧ ಪಕ್ಷಗಳು ಅದರಲ್ಲೂ ಜಾತ್ಯತೀತ ಮನೋಭಾವನೆಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಸಂವಿಧಾನಕ್ಕೆ ತುರ್ತು ಆದೇಶಗಳ ಮೂಲಕ  ತಿದ್ದುಪಡಿ ಮಾಡಿರುವುದನ್ನು ಪ್ರತಿಭಟಿಸಿ 11 ಪತ್ರಿಕೆಗಳು ಮಂಗಳವಾರ ಸಂಚಿಕೆ ಹೊರತರದಿರಲು ನಿರ್ಧರಿಸಿವೆ.

ನ್ಯಾಯಮೂರ್ತಿಗಳ ಮುಷ್ಕರ:  ಇಸ್ಲಾಂವಾದಿ ಅಧ್ಯಕ್ಷರ ಬೆಂಬಲಿಗರ ಮಾನಸಿಕ ಮತ್ತು ದೈಹಿಕ ಒತ್ತಡ ವಿರೋಧಿಸಿ ದೇಶದ ಪ್ರಮುಖ ನ್ಯಾಯಮೂರ್ತಿಗಳು ಸೋಮವಾರದಿಂದ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ.ಅಧ್ಯಕ್ಷರ ಬೆಂಬಲಿಗರು ನ್ಯಾಯಮೂರ್ತಿಗಳಿಗೆ ನ್ಯಾಯಾಲಯ ಪ್ರವೇಶಿಸಲು ಅಡ್ಡಿಪಡಿಸಿದ್ದನ್ನು ಪ್ರತಿಭಟಿಸಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಮಂಗಳವಾರದಿಂದ ಕಾರ್ಯ ನಿರ್ವಹಿಸುವುದಿಲ್ಲ ಎಂದು ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.