ADVERTISEMENT

ಈಜಿಪ್ಟ್: ಮತ್ತೆ ಪ್ರತಿಭಟನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2011, 19:30 IST
Last Updated 22 ನವೆಂಬರ್ 2011, 19:30 IST
ಈಜಿಪ್ಟ್: ಮತ್ತೆ ಪ್ರತಿಭಟನೆಗೆ ಸಿದ್ಧತೆ
ಈಜಿಪ್ಟ್: ಮತ್ತೆ ಪ್ರತಿಭಟನೆಗೆ ಸಿದ್ಧತೆ   

ಕೈರೊ (ಪಿಟಿಐ):  ಸೇನಾ ಆಡಳಿತವನ್ನು ಅಂತ್ಯಗೊಳಿಸುವಂತೆ ಆಗ್ರಹಿಸಿ ಬೃಹತ್ ರ‌್ಯಾಲಿ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಈಜಿಪ್ಟ್ ರಾಜಧಾನಿ ಕೈರೊದ ತಹ್ರೀರ್ ಚೌಕದಲ್ಲಿ  ಮತ್ತೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದಾರೆ.

ಆ ಮೂಲಕ ಹೋಸ್ನಿ ಮುಬಾರಕ್ ಅವರ ಆಡಳಿತ ಪತನಗೊಂಡ ಬಳಿಕ ನಡೆಯಲಿರುವ ದೇಶದ ಮೊದಲ ಚುನಾವಣೆಯ ಹಳಿಯನ್ನು ತಪ್ಪಿಸುವ ಬೆದರಿಕೆಯನ್ನು ಪ್ರತಿಭಟನಾಕಾರರು ಒಡ್ಡಿದ್ದಾರೆ.

ಜತೆಗೆ ದೇಶದಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ಹೋರಾಟಕ್ಕೆ ಸಿಗುತ್ತಿರುವ ಬೆಂಬಲವನ್ನು ಗ್ರಹಿಸಿರುವ, ಹಲವು ವರ್ಷಗಳಿಂದ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ವಿಫಲವಾಗಿರುವ ಪ್ರಮುಖ ರಾಜಕೀಯ ಪಕ್ಷವಾದ ಮುಸ್ಲಿಂ ಬ್ರದರ್‌ಹುಡ್ ಸೇನಾ ಆಡಳಿತವನ್ನು ಅಂತ್ಯಗೊಳಿಸಲು ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆ ನಡೆಸಲು ಕರೆ ನೀಡಿದೆ.

ಕಳೆದ ಭಾನುವಾರದಿಂದೀಚೆಗೆ ಭುಗಿಲೆದ್ದ ಘರ್ಷಣೆಯಲ್ಲಿ 35 ಜನರು ಮೃತಪಟ್ಟಿದ್ದಾರೆ.

ಈ ಮಧ್ಯೆ, ಮಧ್ಯಂತರ ಸರ್ಕಾರದ ಪ್ರಧಾನಿ ಎಸ್ಸಾಂ ಶರಫ್ ನೇತೃತ್ವದ ಸಂಪುಟ ನೀಡಿರುವ ರಾಜೀನಾಮೆಯನ್ನು ಶಸ್ತ್ರಾಸ್ತ್ರ ಪಡೆಗಳ ಉನ್ನತ ಮಂಡಳಿ (ಎಸ್‌ಸಿಎಎಫ್) ತಳ್ಳಿ ಹಾಕಿದ್ದು,  ಪ್ರತಿಭಟನಾಕಾರರನ್ನು ಮಾತುಕತೆಗೆ ಆಹ್ವಾನಿಸಿದೆ ಎಂದು ವರದಿಯಾಗಿದೆ.

ರಾಜೀನಾಮೆಯನ್ನು ಅಂಗೀಕರಿಸುವ ಮೊದಲು ಒಪ್ಪಂದವೊಂದಕ್ಕೆ ಸಹಿ ಹಾಕುವಂತೆ ಎಸ್‌ಸಿಎಎಫ್ ಪ್ರಧಾನಿ ಅವರಿಗೆ ಸೂಚಿಸಿದೆ ಎಂದು ಅಲ್-ಜಜೀರಾ ವರದಿ ಮಾಡಿದೆ.

 ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚಲು ಮತ್ತು ಸಮಸ್ಯೆಯನ್ನು ಪರಿಹರಿಸುವುದರ ಬಗ್ಗೆ ಚರ್ಚಿಸಲು ಎಲ್ಲಾ ರಾಜಕೀಯ ಪಕ್ಷಗಳ ಮತ್ತು ರಾಷ್ಟ್ರೀಯ  ಪಡೆಗಳ ತುರ್ತು ಸಭೆಯನ್ನು ಎಸ್‌ಸಿಎಎಫ್ ಕರೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ದೇಶದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬ್ರದರ್‌ಹುಡ್ ಮಾತುಕತೆಯಲ್ಲಿ ಭಾಗವಹಿಸುವುದಾಗಿ ಹೇಳಿದೆ.
ಈ ಮಧ್ಯೆ. ಇತ್ತೀಚೆಗೆ ನಡೆದಿರುವ ಹಿಂಸಾಚಾರದ ತನಿಖೆ ನಡೆಸಲು  ಸಮಿತಿಯೊಂದನ್ನು ರಚಿಸುವಂತೆ ಸರ್ಕಾರ ಕಾನೂನು ಸಚಿವಾಲಯಕ್ಕೆ ಸೂಚಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.