ADVERTISEMENT

ಈಜಿಪ್ಟ್: ಹಿಂಸಾಚಾರಕ್ಕೆ ಮತ್ತೆ 16 ಬಲಿ

ರಾಜೀನಾಮೆಗೆ ಮೊಹಮ್ಮದ್ ಮೊರ್ಸಿ ನಕಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ಕೈರೊ (ಪಿಟಿಐ): ಆಡಳಿತ ವಿರೋಧಿ ಚಳವಳಿಗಾರರು ನಡೆಸುತ್ತಿರುವ ತೀವ್ರ ಪ್ರತಿಭಟನೆಗೆ ಹಾಗೂ ಸೇನೆ ನೀಡಿರುವ 48 ಗಂಟೆಗಳ ಗಡುವಿಗೆ ಜಗ್ಗದ ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ಇದರ ನಡುವೆಯೇ, ಕೈರೊ ವಿಶ್ವವಿದ್ಯಾಲಯದಲ್ಲಿ ಮೊರ್ಸಿ ಪರ ಹಾಗೂ ವಿರೋಧಿ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ 16 ಜನರು ಮೃತಪಟ್ಟಿದ್ದಾರೆ.

ರಾಜೀನಾಮೆ ನೀಡಲ್ಲ:  ತಾವು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆ ಮೂಲಕ ದೇಶವನ್ನು ಮುನ್ನಡೆಸಲು ಆಯ್ಕೆಯಾಗಿದ್ದು, ತಮ್ಮ ಕರ್ತವ್ಯವನ್ನು ನಿರ್ವಹಿಸಲು ಇಚ್ಛಿಸುವುದಾಗಿ ಮೊಹಮ್ಮದ್ ಮೊರ್ಸಿ ಹೇಳಿದ್ದಾರೆ.

ಮಂಗಳವಾರ ಸಂಜೆ ಟಿವಿಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಮೊರ್ಸಿ, `ಒಂದು ವೇಳೆ ಪ್ರತಿಭಟನೆ, ಹಿಂಸಾಚಾರ ಹೀಗೆಯೇ ಮುಂದುವರಿದರೆ ದೇಶದ ಸಂವಿಧಾನದ ತತ್ವ-ಸಿದ್ಧಾಂತಗಳನ್ನು ಎತ್ತಿ ಹಿಡಿಯುವುದಕ್ಕಾಗಿ ರಾಷ್ಟ್ರದಲ್ಲಿ ಮತ್ತೆ ರಕ್ತಪಾತ ಅನಿವಾರ್ಯವಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

`ಈಜಿಪ್ಟ್‌ಗಾಗಿ ಜೀವವನ್ನೇ ನೀಡಲು ನಾನು ಸಿದ್ಧ. ಆದರೆ, ನಾನು ಈ ದೇಶದ ನಾಯಕ. ರಾಜೀನಾಮೆ ನೀಡಿ ರಾಷ್ಟ್ರದಲ್ಲಿ ಮತ್ತೆ ಹಿಂಸಾಚಾರ, ರಕ್ತಪಾತ ಉಂಟು ಮಾಡಲು ಬಯಸುವುದಿಲ್ಲ' ಎಂದು ಮೊರ್ಸಿ ಹೇಳಿದ್ದಾರೆ.

ಆಡಳಿತ ವಿರೋಧಿ ಚಳವಳಿಯ ಹಿನ್ನೆಲೆಯಲ್ಲಿ ಜನರಿಂದ ನೇರವಾಗಿ ಆಯ್ಕೆಗೊಂಡಿರುವ ಈಜಿಪ್ಟ್‌ನ ಮೊದಲ  ಅಧ್ಯಕ್ಷರಾಗಿರುವ ಮೊಹಮ್ಮದ್ ಮೊರ್ಸಿ ಅವರ ಸಂಪುಟದ ಸಹೋದ್ಯೋಗಿಗಳೂ ಅವರಿಂದ ದೂರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.