ವಾಷಿಂಗ್ಟನ್ (ಪಿಟಿಐ): ಉಕ್ರೇನ್ ಬಿಕ್ಕಟ್ಟಿನ ತೀವ್ರತೆ ಶಮನ ಮಾಡುವಲ್ಲಿ ರಷ್ಯಾದ ಬಳಿ ಇನ್ನೂ ಅವಕಾಶಗಳಿವೆ ಎಂದಿರುವ ಅಮೆರಿಕ, ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದ್ದು ಮಾಸ್ಕೊ ಕಡೆಯಿಂದಲೇ ಎಂದು ತಿರುಗೇಟು ನೀಡಿದೆ.
ರಷ್ಯಾ ಸರ್ಕಾರ, ಬ್ಯಾಂಕು ಹಾಗೂ ವ್ಯಕ್ತಿಗಳ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ಒಬಾಮ ಅವರು ಹೊಸ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಶ್ವೇತಭವನ ಈ ಹೇಳಿಕೆ ಬಿಡುಗಡೆ ಮಾಡಿದೆ.‘ನಿರ್ಬಂಧಗಳನ್ನು ವಿಧಿಸುವುದು ನಮ್ಮ ಆದ್ಯತೆ ಅಲ್ಲ, ಈಗಾಗಲೇ ವಿಧಿಸಿರುವ ನಿರ್ಬಂಧಗಳು ರಷ್ಯಾದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ವನ್ನುಂಟು ಮಾಡುತ್ತವೆ, ಸಹಜವಾಗಿ ಇದರ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೂ ಆಗುತ್ತದೆ. ಆದರೆ ಉಕ್ರೇನ್ ಸಾರ್ವ ಭೌಮತ್ವ ಎತ್ತಿಹಿಡಿಯುವ ವಿಷಯ ದಲ್ಲಿ ರಷ್ಯಾ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆ ಕಾರ್ನಿ ಸುದ್ದಿಗಾರರಿಗೆ ತಿಳಿಸಿದರು.
‘ಉಕ್ರೇನ್ ಜತೆ ಮಾತುಕತೆ ನಡೆಸುವ ಮೂಲಕ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಅವಕಾಶಗಳು ಇನ್ನೂ ರಷ್ಯಾದ ಬಳಿ
ಇವೆ’ ಎಂದರು.ಪ್ರತೀಕಾರ ತಡೆದುಕೊಳ್ಳುತ್ತೇವೆ–ಪುಟಿನ್: ಈ ನಡುವೆ ಅಮೆರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳು ವಿಧಿಸಿ-ರುವ ಹಲವು ನಿರ್ಬಂಧಗಳ ಕುರಿತು ಪ್ರತಿಕ್ರಿಯಿಸಿರುವರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ‘ಇಂತಹ ನಿರ್ಬಂಧಗಳ ಪರಿಣಾಮಗಳನ್ನು ನಾವು ಈಗಲೂ ತಡೆದುಕೊಳ್ಳುತ್ತೇವೆ’ ಎಂದರು.
ರಷ್ಯಾ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಪುಟಿನ್, ‘ನಾವೇನಾದರೂ ವೀಸಾ ನಿರ್ಭಂಧ ಗಳನ್ನು ವಿಧಿಸಿದಲ್ಲಿ ಇದರಿಂದ ರಷ್ಯಾದಲ್ಲಿರುವ ಲಕ್ಷಾಂತರ ಮುಗ್ಧ ಉಕ್ರೇನ್ ಕುಟುಂಬದವರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಮತ್ತಷ್ಟು ನಿರ್ಬಂಧ: ರಷ್ಯಾ ವಿರುದ್ಧ ಪ್ರವಾಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಮತ್ತಷ್ಟು ಹೆಚ್ಚಿಸಿರುವುದಾಗಿ ಐರೋಪ್ಯ ಒಕ್ಕೂಟದ ಅಧ್ಯಕ್ಷ ಹರ್ಮ್ಯಾನ್ ವ್ಯಾನ್ ಕೌಂಪಿ ತಿಳಿಸಿದ್ದಾರೆ.
ರಷ್ಯಾ ರೂಬಲ್ ಬಳಸಲು ಮುಂದಾದ ಕ್ರಿಮಿಯಾ (ಸಿಮ್ಮರ್‌ಪೊಲ್‌ವರದಿ): ಉಕ್ರೇನ್‌ನಿಂದ ಸ್ವತಂತ್ರಗೊಂಡು ರಷ್ಯಾದ ಜತೆ ಗುರುತಿಸಿಕೊಂಡಿರುವ ಕ್ರಿಮಿಯಾ, ಇದೇ 24ರಿಂದ ರಷ್ಯಾದ ಅಧಿಕೃತ ಕರೆನ್ಸಿಯಾದ ರೂಬಲ್ ಅನ್ನು ತನ್ನ ಅಧಿಕೃತ ಹಣ ಚಲಾವಣೆಯ ಮಾಧ್ಯಮವನ್ನಾಗಿ ಬಳಸಲು ನಿರ್ಧರಿಸಿದೆ.
‘ಮಾರ್ಚ್ 24ರಿಂದ ಪಿಂಚಣಿ, ಸಂಬಳ ಮತ್ತಿತರ ಪಾವತಿ ಇಲ್ಲವೆ ಹಣಕಾಸು ವ್ಯವಹಾರವನ್ನು ರೂಬಲ್ನಲ್ಲೇ ನಡೆಸಲಾಗುವುದು, ಈಗಾಗಲೇ ನಮ್ಮಲ್ಲಿ ರೂಬಲ್ ಇದೆ’ ಎಂದು ಕ್ರಿಮಿಯಾ ಪ್ರಧಾನಿ ಸೆರ್ಜೆ ಅಕ್ಸೆನೊವ್ ತಿಳಿಸಿದರು.
ರಷ್ಯಾ ಭೂ ನಕ್ಷೆಯಲ್ಲಿ ಕ್ರಿಮಿಯಾ: ಕಾನೂನಿಗೆ ಪುಟಿನ್ ಸಹಿ
ಮಾಸ್ಕೊ (ಐಎಎನ್‌ಎಸ್): ಅಮೆರಿಕ ಮತ್ತಿತರ ಅಂತಾರಾಷ್ಟ್ರೀಯ ಸಮು ದಾಯದ ತೀವ್ರ ವಿರೋಧದ ನಡುವೆಯೂ ರಷ್ಯಾದ ಅವಿಭಾಜ್ಯ ಅಂಗವಾಗಿ ಕ್ರಿಮಿಯಾವನ್ನು ಸೇರ್ಪಡೆ ಗೊಳಿಸುವ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಸಹಿ ಹಾಕಿದರು.ಸಂಸತ್ತಿನ ಉಭಯ ಸದನಗಳ ಸರ್ವಾನುಮತದ ನಿರ್ಣಯಕ್ಕೆ ಅನುಸಾರವಾಗಿ ಪುಟಿನ್ ಈ ಸಂಬಂಧದ ಕಾನೂನು ಕಡತಕ್ಕೆ ಸಹಿ ಹಾಕಿದ್ದು, ನೂತನ ಫೆಡರಲ್ ಜಿಲ್ಲೆಯಾದ ಕ್ರಿಮಿಯಾಕ್ಕೆ ರಾಷ್ಟ್ರಪತಿಗಳ ಪ್ರತಿನಿಧಿ ಯನ್ನಾಗಿ ಒಲೆಗ್ ವ್ಲಾಡಿಮಿರೊವಿಚ್ ಬುಲಾವಿನ್ಸೆತೆವ್ ಅವರನ್ನು ನೇಮಕ ಮಾಡಲಾಯಿತು. ಕ್ರಿಮಿಯಾ ಸೇರ್ಪಡೆ ವಿಷಯದ ಒಪ್ಪಂದಕ್ಕೆ ಪುಟಿನ್ ಮಂಗಳವಾರವೇ ಆರಂಭಿಕವಾಗಿ ಸಹಿ ಹಾಕಿದ್ದು, ಇದೀಗ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.