ADVERTISEMENT

ಉಗ್ರರಿಗೆ ಪಾಕ್ ತರಬೇತಿ:ಚೀನಾ ಆರೋಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2011, 19:30 IST
Last Updated 1 ಆಗಸ್ಟ್ 2011, 19:30 IST
ಉಗ್ರರಿಗೆ ಪಾಕ್ ತರಬೇತಿ:ಚೀನಾ ಆರೋಪ
ಉಗ್ರರಿಗೆ ಪಾಕ್ ತರಬೇತಿ:ಚೀನಾ ಆರೋಪ   

ಬೀಜಿಂಗ್, (ಐಎಎನ್‌ಎಸ್):  ಸ್ವಾಯತ್ತ ಪ್ರದೇಶವಾದ ಕ್ಸಿಂಜಿಯಾಂಗ್‌ಉಯ್‌ಗರ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ಪಾಕಿಸ್ತಾನ ತರಬೇತಿ ನೀಡಿದೆ ಎಂದು ಚೀನಾ ಸೋಮವಾರ ಆಪಾದಿಸಿದೆ.

ದೇಶದ ಗಡಿಯಾಚೆಗೆ ತರಬೇತಿ ಪಡೆದ ಭಯೋತ್ಪಾದಕರು ಉಗ್ರವಾದಿ ಧಾರ್ಮಿಕ ಸಂಘಟನೆಯ ಜತೆ ಸೇರಿಕೊಂಡು ಈ ದಾಳಿ ನಡೆಸಿದ್ದಾರೆ ಎಂದು ಸರ್ಕಾರಿ ಒಡೆತನದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಾಕ್‌ನಲ್ಲಿರುವ  ಪೂರ್ವ ತುರ್ಕಿಸ್ತಾನ ಇಸ್ಲಾಂ ಆಂದೋಲನ (ಇಟಿಐಎಂ) ಸಂಘಟನೆಯ ಧಾರ್ಮಿಕ ಮುಖಂಡರಿಗೆ ಬಾಂಬ್ ತಯಾರಿಸುವ ಹಾಗೂ ಅದನ್ನು ಸ್ಫೋಟಿಸುವ ತರಬೇತಿ ನೀಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾನುವಾರ ಭಯೋತ್ಪಾದಕರು ಹೋಟೆಲ್‌ವೊಂದಕ್ಕೆ ಬೆಂಕಿ ಹಚ್ಚಿ, ನಂತರ ನಡೆಸಿದ ವಿಧ್ವಂಸಕ ಕೃತ್ಯದಲ್ಲಿ  ಆರು ಮಂದಿ ಸತ್ತಿದ್ದು, 15 ಜನರು ಗಾಯಗೊಂಡಿದ್ದಾರೆ. ಪೊಲೀಸರು ಗುಂಡು ಹಾರಿಸಿದ್ದರಿಂದ ಐವರು ಶಂಕಿತ ಉಗ್ರಗಾಮಿಗಳು ಸತ್ತಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಇಬ್ಬರು ಶಂಕಿತರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದಾರೆ.

ಮತ್ತೆ ಹಿಂಸಾಚಾರ: 11 ಸಾವು
ಹಿಂಸಾಪೀಡಿತ ಕ್ಸಿಂಜಿಯಾಂಗ್‌ನಲ್ಲಿ ಹಿಂಸಾಚಾರ ಮುಂದುವರಿದಿದ್ದು, ಉಯ್‌ಗರ್ ಪ್ರತ್ಯೇಕತಾವಾದಿಗಳು ನಡೆಸಿದ್ದಾರೆ ಎನ್ನಲಾದ ದಾಳಿಯಲ್ಲಿ  6 ನಾಗರಿಕರು ಹಾಗೂ ಐವರು ಶಂಕಿತ ಉಗ್ರರು ಮೃತಪಟ್ಟಿದ್ದಾರೆ.
ಕಳೆದ  ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 25 ಕ್ಕೆ ಏರಿದೆ.

ಉಗ್ರರ ದಮನಕ್ಕೆ ಸಂಪೂರ್ಣ ಸಹಕಾರ
ಇಸ್ಲಾಮಾಬಾದ್ (ಪಿಟಿಐ):
ಪೂರ್ವ ತುರ್ಕಮೆನಿಸ್ತಾನ ಇಸ್ಲಾಮಿಕ್ ಚಳವಳಿಯ ಉಗ್ರರ ದಮನದಲ್ಲಿ  (ಇಟಿಐಎಂ) ಚೀನಾ ದೇಶಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ  ಸೋಮವಾರ ಪಾಕಿಸ್ತಾನ ಭರವಸೆ ನೀಡಿದೆ.

ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ನಡೆದ ದಾಳಿ ಹಿಂದೆ ಪಾಕ್‌ನಲ್ಲಿ ತರಬೇತಿ ಪಡೆದ ಉಗ್ರರ ಕೈವಾಡದ ಬಗ್ಗೆ ಚೀನಾ ಆರೋಪಿಸಿದ ಬೆನ್ನಲ್ಲಿಯೇ ಪಾಕಿಸ್ತಾನ ಈ ಭರವಸೆಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.