ADVERTISEMENT

ಉಗ್ರರ ಅಡಗುದಾಣ ಧ್ವಂಸ: ಭಾರತ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ವಿಶ್ವಸಂಸ್ಥೆ (ಪಿಟಿಐ): ಭಯೋತ್ಪಾದಕರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಜಾಲಗಳನ್ನು ಬಯಲುಗೊಳಿಸುವ ಜತೆಗೆ ಉಗ್ರ ಸಂಘಟನೆಗಳ ಸುರಕ್ಷಿತ ಅಡಗುದಾಣಗಳನ್ನು ಧ್ವಂಸಗೊಳಿಸಬೇಕು ಎಂದು ಅಂತರರಾಷ್ಟ್ರೀಯ ಸಮುದಾಯವನ್ನು ಭಾರತ ಒತ್ತಾಯಿಸಿದೆ.

ಉಗ್ರರ ಜಾಲ ಸದೃಢವಾಗಿದೆ. ಒಂದು ರಾಷ್ಟ್ರದಲ್ಲಿ ತಮಗೆ ಬೇಕಾದವರನ್ನು ನಿಯೋಜಿಸಿಕೊಂಡು, ಮತ್ತೊಂದು ರಾಷ್ಟ್ರದಲ್ಲಿ ನಿಧಿ ಸಂಗ್ರಹಿಸಿ, ಬೇರೊಂದು ರಾಷ್ಟ್ರದಲ್ಲಿ ಚಟುವಟಿಕೆ ನಿರತರಾಗುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಹರ್‌ದೀಪ್ ಸಿಂಗ್ ಪುರಿ ಹೇಳಿದರು.

ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿಯವರು ಏರ್ಪಡಿಸಿದ್ದ `ಅಂತರರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಹಕಾರ~ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಭಯೋತ್ಪಾದನೆ ವಿರುದ್ಧ ಜಾಗತಿಕ ಸಹಕಾರಕ್ಕೆ ಕಾನೂನಿನ ಬಲ ನೀಡುವ ದಿಸೆಯಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದನಾ ಒಪ್ಪಂದ ಜಾರಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿವಿಧ ರಾಷ್ಟ್ರಗಳ ವಕೀಲರು, ಪೊಲೀಸ್ ಅಧಿಕಾರಿಗಳು, ವಲಸೆ ಹಾಗೂ ಗಡಿ ಭದ್ರತಾ ಅಧಿಕಾರಿಗಳ ನಡುವೆ ಸಹಕಾರ ಹೆಚ್ಚಿಸುವ ನೀತಿ ಜಾರಿಯಾಗಬೇಕಿದೆ. ವಿವಿಧ ನಾಗರಿಕತೆಗಳು, ಬುಡಕಟ್ಟುಗಳು, ಧರ್ಮಗಳ ನಡುವೆ ಸಂವಾದಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ತಮಗೆ ಬೇಕಾದ ಸಾಧನ, ಸಲಕರಣೆಗಳನ್ನು ಶೀಘ್ರವೇ ಪೂರೈಸುವ ಜಾಗತಿಕ ಸರಬರಾಜು ವ್ಯವಸ್ಥೆಯನ್ನು ಭಯೋತ್ಪಾದಕರು ಹೊಂದಿದ್ದಾರೆ. ಎಂದು ವಿವರಿಸಿದರು.

ಭಯೋತ್ಪಾದನೆಯ ಪಿಡುಗು ಭಾರತವನ್ನು ಕಾಡುತ್ತಿದೆ. ಜಾಗತಿಕ ಸಮುದಾಯದ ಪ್ರಯತ್ನಗಳ ನಡುವೆಯೂ ಭಯೋತ್ಪಾದಕರ ಹಿಂಸೆ ಮುಂದುವರಿದಿದ್ದು ಸವಾಲುಗಳು ಎದುರಾಗುತ್ತಲೇ ಇವೆ. ಭಯೋತ್ಪಾದಕರ ಸವಾಲನ್ನು ಮುಖಾಮುಖಿಯಾಗಿ ಎದುರಿಸಲು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂದು ಪುರಿ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.