ADVERTISEMENT

ಉದ್ಯಮಿ ವಿಜಯ್‌ ಮಲ್ಯಗೆ ಡಿಸೆಂಬರ್‌ 4ರವರೆಗೆ ಜಾಮೀನು

ಏಜೆನ್ಸೀಸ್
Published 13 ಜೂನ್ 2017, 13:38 IST
Last Updated 13 ಜೂನ್ 2017, 13:38 IST
ವಿಜಯ್‌ ಮಲ್ಯ (ಸಾಂದರ್ಭಿಕ ಚಿತ್ರ)
ವಿಜಯ್‌ ಮಲ್ಯ (ಸಾಂದರ್ಭಿಕ ಚಿತ್ರ)   

ಲಂಡನ್: ಉದ್ಯಮಿ ವಿಜಯ್ ಮಲ್ಯ ಅವರ ಗಡಿಪಾರಿಗೆ ಸಂಬಂಧಿಸಿದ ವಿಚಾರಣೆ ಇಲ್ಲಿನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಲ್ಯ ಅವರಿಗೆ ಡಿಸೆಂಬರ್ 4ರವರೆಗೆ ಜಾಮೀನು ನೀಡಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ನಿಗದಿಪಡಿಸಿದೆ.

ನ್ಯಾಯಾಲಯದ ಹೊರಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಲ್ಯ, ‘ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾನು ಹೇಳುವುದು ಏನೂ ಇಲ್ಲ. ತಪ್ಪಿತಸ್ಥ ಅಲ್ಲ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯ ಇದೆ. ಆರೋಪಗಳನ್ನು ಹಿಂದಿನಿಂದಲೂ ನಿರಾಕರಿಸುತ್ತಾ ಬಂದಿದ್ದೇನೆ. ಮುಂದೆಯೂ ನಿರಾಕರಿಸಲಿದ್ದೇನೆ’ ಎಂದು ಹೇಳಿದ್ದಾರೆ.

ನ್ಯಾಯಾಲಯದ ತೀರ್ಪಿನ ಬಗ್ಗೆ ಏನು ನಿರೀಕ್ಷೆಗಳಿವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಯಾವುದೇ ನಿರೀಕ್ಷೆಗಳಿಲ್ಲ. ನ್ಯಾಯಾಲಯ ಏನು ಹೇಳುತ್ತದೆ ಎಂಬುದನ್ನು ನೀವೇ ಕೇಳಬಹುದು’ ಎಂದಿದ್ದಾರೆ.

ADVERTISEMENT

‘ಕೋಟ್ಯಂತರ ರೂಪಾಯಿ ಬಗ್ಗೆ ಕನಸು ಕಾಣುತ್ತಿರಿ’: ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವರದಿಗಾರರನ್ನು ಉದ್ದೇಶಿಸಿ ‘ಲಕ್ಷಾಂತರ ಪೌಂಡ್‌ಗಳ ಬಗ್ಗೆ (ಸಾವಿರಾರು ಕೋಟಿ ರೂಪಾಯಿ) ಕನಸು ಕಾಣುತ್ತಿರಿ’ ಎಂದು ಮಲ್ಯ ಹೇಳಿದ್ದಾರೆ ಎನ್ನಲಾಗಿದೆ.

‘ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಇಬ್ಬರು ಕುಡುಕ ಕ್ರಿಕೆಟ್ ಪ್ರೇಮಿಗಳು ನನಗೆ ಇರಿಸುಮುರಿಸು ಉಂಟು ಮಾಡಿದ್ದರು. ಅದನ್ನು ನೀವು (ಮಾಧ್ಯಮಗಳು) ಬಿತ್ತರಿಸುತ್ತೀರಿ. ಓವಲ್‌ನ ಬಹಳಷ್ಟು ಜನ ನನಗೆ ಒಳ್ಳೆಯದನ್ನು ಬಯಸಿದ್ದಾರೆ’ ಎಂದು ಹೇಳಿ ಮಲ್ಯ ನ್ಯಾಯಾಲಯದ ಆವರಣದಿಂದ ತೆರಳಿದ್ದಾರೆ. ಕಳೆದ ವಾರ ಭಾರತ–ದಕ್ಷಿಣ ಆಫ್ರಿಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಿಸಲು ಬಂದಿದ್ದ ಮಲ್ಯ ಅವರನ್ನು ಕ್ರಿಕೆಟ್ ಪ್ರೇಮಿಗಳು ‘ಚೋರ್, ಚೋರ್ (ಕಳ್ಳ, ಕಳ್ಳ)’ ಎಂದು ನಿಂದಿಸಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು.

ಹದಿಮೂರು ಬ್ಯಾಂಕ್‌ಗಳಿಂದ ಪಡೆದ ₹ 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡದ ಆರೋಪ ಮಲ್ಯ ಮೇಲಿದೆ. ಹೀಗಾಗಿ ಅವರನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.