ADVERTISEMENT

ಎಂಜಿನ್‌ಗೆ ಹಾನಿ: ವಿಮಾನ ತುರ್ತು ಭೂಸ್ಪರ್ಶ

ಏಜೆನ್ಸೀಸ್
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಎಂಜಿನ್‌ಗೆ ಹಾನಿ: ವಿಮಾನ ತುರ್ತು ಭೂಸ್ಪರ್ಶ
ಎಂಜಿನ್‌ಗೆ ಹಾನಿ: ವಿಮಾನ ತುರ್ತು ಭೂಸ್ಪರ್ಶ   

ಪ್ಯಾರಿಸ್‌: ಏರ್‌ ಫ್ರಾನ್ಸ್ ಎ380 ಸೂಪರ್ ಜಂಬೊ ವಿಮಾನದ ಒಂದು ಎಂಜಿನ್‌ಗೆ ಹಾನಿಯಾಗಿದ್ದರಿಂದ ಕೆನಡಾದಲ್ಲಿ ಅದು ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿ 500ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಪ್ರಯಾಣಿಕರಿಗೆ ಎಂಜಿನ್‌ನಿಂದ ದೊಡ್ಡ ಶಬ್ದ ಬರುತ್ತಿದ್ದುದು ಕೇಳಿಬಂತು. ಅಲ್ಲದೆ ವಿಮಾನ ನಡುಗಲಾರಂಭಿಸಿತ್ತು.

ಎಂಜಿನ್‌ಗೆ ಭಾರಿ ಹಾನಿಯಾಗಿದ್ದುದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ವಿಡಿಯೊ ಮತ್ತು ಛಾಯಾಚಿತ್ರಗಳಲ್ಲಿ ಕಂಡುಬಂದಿದೆ.

ಡಬಲ್ ಡೆಕ್ಕರ್‌ನ ಈ ಜಂಬೊ ವಿಮಾನದಲ್ಲಿ 496 ಪ್ರಯಾಣಿಕರು ಮತ್ತು 24 ಸಿಬ್ಬಂದಿ ಇದ್ದರು. ಪ್ಯಾರಿಸ್‌ನಿಂದ ಹೊರಟಿದ್ದ ವಿಮಾನವು ಲಾಸ್‌ ಏಂಜಲೀಸ್‌ಗೆ ಹೋಗಬೇಕಿತ್ತು. ಹಾರಾಟ ಆರಂಭಿಸಿದ ಹಲವು ಗಂಟೆಗಳಲ್ಲಿ ಎಂಜಿನ್‌ಗೆ ಹಾನಿಯಾಗಿತ್ತು.

ADVERTISEMENT

‘ವಿಮಾನದಿಂದ ಭಾರಿ ಪ್ರಮಾಣದ ಶಬ್ದ ಕೇಳಿಸಿತು. ಆನಂತರ ಹಾರಾಟದ ಎತ್ತರ ಒಂದೇ ಸಮನೆ ಕುಸಿಯಿತು’ ಎಂದು ಸಾರಾ ಎಮಿಘಾ ಎಂಬ ಪ್ರಯಾಣಿಕರೊಬ್ಬರು ಕೆನಡಾದ ಸಿಬಿಸಿ ಸುದ್ದಿಸಂಸ್ಥೆಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

‘ಎಂಜಿನ್‌ಗೆ ಹಾನಿಯಾದ ನಂತರ ವಿಮಾನವನ್ನು ಪೂರ್ವ ಕೆನಡಾದ ಗೂಸ್‌ಬೆ ಸೇನಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಕೂಡಲೇ ಎಲ್ಲ ಪ್ರಯಾಣಿಕರನ್ನು ತೆರವುಗೊಳಿಸಲಾಯಿತು. ಯಾರಿಗೂ ಯಾವುದೇ ಗಾಯಗಳಾಗಿಲ್ಲ’ ಎಂದು ಏರ್‌ ಫ್ರಾನ್ಸ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.