ADVERTISEMENT

ಎಚ್‌ಐವಿಗೆ ಪರಿಣಾಮಕಾರಿ ಗುಳಿಗೆ...

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ಲಂಡನ್ (ಪಿಟಿಐ): ಎಚ್‌ಐವಿ ಸೋಂಕು ಪೀಡಿತರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಸೋಂಕು ಪೀಡಿತರು ದಿನಕ್ಕೆ ನಾಲ್ಕು ಮಾತ್ರೆ ಸೇವಿಸುವ ಬದಲು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಒಂದೇ ಮಾತ್ರೆ ನುಂಗಿದರೆ ಸಾಕು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ನಾಲ್ಕು ಮಾತ್ರೆಗಳ ಔಷಧ ಗುಣಗಳನ್ನು ಒಳಗೊಂಡಿರುವ `ಕ್ವಾಡ್~ ಎನ್ನುವ ಈ ಹೊಸ ಮಾತ್ರೆ ಸೋಂಕಿಗೆ ರಾಮಬಾಣವಾಗಿದ್ದು, ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿರುವುದಾಗಿ ಈ ಕುರಿತು ಅಧ್ಯಯನ ನಡೆಸಿದವರು ಹೇಳಿಕೊಂಡಿದ್ದಾರೆ.

ಎಚ್‌ಐವಿ ಸೋಂಕಿತರು ಸದ್ಯ ನಿಯಮಿತವಾಗಿ ಮಾತ್ರೆ ಸೇವಿಸಿ, ವೈದ್ಯಕೀಯ ತಪಾಸಣೆಗೇ ಒಳಗಾಗಬೇಕಿತ್ತು. ಒಂದು ದಿನವೇನಾದರೂ ಮಾತ್ರೆ ನುಂಗದಿದ್ದರೆ ರೋಗ ನಿರೋಧಕ ಶಕ್ತಿಯೇ ಕುಂಠಿತಗೊಂಡು, ತೀವ್ರ ಅನಾರೋಗ್ಯಕ್ಕೀಡಾಗುತ್ತಿದ್ದರು.

ಆದರೆ, ಈಗ ನಡೆಸಿರುವ ಅಂತರರಾಷ್ಟ್ರೀಯ ಮಟ್ಟದ ಎರಡು ಪರೀಕ್ಷೆಗಳು ಎಚ್‌ಐವಿ ಸೋಂಕಿಗೆ `ಕ್ವಾಡ್~ ಮಾತ್ರೆ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ವಿಧಾನವೆಂದು ದೃಢಪಡಿಸಿವೆ. ಇದು ಈ ಸೋಂಕಿನ ಚಿಕಿತ್ಸಾ ವಿಧಾನವನ್ನು ಮತ್ತಷ್ಟು ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

`ನಾವು ನಡೆಸಿದ ಪರೀಕ್ಷೆಯು ಉತ್ಕೃಷ್ಟವಾದ ಫಲಿತಾಂಶ ನೀಡಿದೆ. ಇದು ಎಚ್‌ಐವಿ ಸೋಂಕಿಗೆ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವಾಗಿದೆ ಮತ್ತು ಚಿಕಿತ್ಸೆಯನ್ನು ಇನ್ನಷ್ಟು ಸರಳಗೊಳಿಸಿದೆ. ಒಂದೇ ಮಾತ್ರೆಯಿಂದ ಸೋಂಕನ್ನು ನಿಯಂತ್ರಿಸಬಹುದು~ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ `ಬ್ರಿಗ್‌ಹ್ಯಾಂ ಅಂಡ್ ವುಮೆನ್ಸ್~ ಆಸ್ಪತ್ರೆಯ ಪಾಲ್ ಸ್ಯಾಕ್ಸ್ ಹೇಳಿಕೆಯನ್ನು ಉಲ್ಲೇಖಿಸಿ `ಡೈಲಿ ಮೇಲ್~ ವರದಿ ಮಾಡಿದೆ.

`ಇದೇ ಸೋಂಕಿಗೆ ಇರುವ ಇತರ ಚಿಕಿತ್ಸಾ ವಿಧಾನಗಳಿಗೆ ಹೋಲಿಸಿದರೆ ತೊಂದರೆ ಅಥವಾ ವಿಫಲತೆಯ ಪ್ರಮಾಣ ನಮ್ಮ ಚಿಕಿತ್ಸಾ ವಿಧಾನದಲ್ಲಿ ತೀರಾ ಕಡಿಮೆ. ಬದಲಿಗೆ ಈ ಮಾತ್ರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ~ ಎಂದು ಪ್ರತಿಪಾದಿಸಿರುವ ಅವರು, `ಸೋಂಕು ಪೀಡಿತರು ನಾವು ಸಂಶೋಧಿಸಿರುವ ಮಾತ್ರೆಯ ಬಗ್ಗೆ ಉತ್ತಮವಾಗಿಯೇ ಪ್ರತಿಕ್ರಿಯಿಸಿದ್ದಾರೆ~ ಎಂದೂ ಹೇಳಿಕೊಂಡಿದ್ದಾರೆ.

ಈ ಮಾತ್ರೆ ಎಲ್ವಿಟೆಗ್ರ್ಯಾವಿರ್, ಕೊಬಿಸಿಸ್ಟಾಸ್ಟ್, ಎಂಟ್ರಿಸಿಟ್ಯಾಬಿನ್ ಮತ್ತು ಟೆನೊಫೊವಿರ್ ಡಿಸೊಪ್ರಾಕ್ಸಿಲ್ ಫ್ಯುಮರೇಟ್‌ಗಳ ಸಮ್ಮಿಶ್ರಣವಾಗಿದೆ. ಹಲವಾರು ರೋಗ ನಿರೋಧಕ ಅಂಶಗಳನ್ನು ಹೊಂದಿರುವ ಈ ಮಾತ್ರೆ ಮತ್ತು ಅಟ್ರಿಪ್ಲಾ ಎನ್ನುವ ಇನ್ನೊಂದು ಮಾತ್ರೆಯನ್ನು ಉತ್ತರ ಅಮೆರಿಕದ ಸುಮಾರು ಏಳು ನೂರು ಎಚ್‌ಐವಿ ಸೋಂಕು ಪೀಡಿತರಿಗೆ ಪ್ರತ್ಯೇಕವಾಗಿ ನೀಡಲಾಯಿತು.

ಚಿಕಿತ್ಸೆ ಆರಂಭಿಸಿದ 48 ವಾರಗಳ ಬಳಿಕ ಕ್ವಾಡ್ ಗುಳಿಗೆ ಸೇವಿಸಿದವರಲ್ಲಿ ಶೇ 87ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿರುವುದು ಗೊತ್ತಾಯಿತು ಎಂದು `ಡೈಲಿ ಮೇಲ್~ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.