ADVERTISEMENT

ಎನ್‌ಎಸ್‌ಎ ಸಭೆ: ಪಾಕ್‌ಗೆ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 13:33 IST
Last Updated 12 ಡಿಸೆಂಬರ್ 2013, 13:33 IST

ಇಸ್ಲಾಮಾಬಾದ್‌ (ಪಿಟಿಐ): ಭಯೋತ್ಪಾದನೆ ಸಂಬಂಧಿ ಚರ್ಚೆಗೆ ಎರಡೂ ಕಡೆಯ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ನಡುವೆ ಸಭೆ ನಡೆಸಲು ವ್ಯವಸ್ಥೆಯೊಂದನ್ನು ಸ್ಥಾಪಿಸುವ ತಮ್ಮ ಪ್ರಸ್ತಾವಕ್ಕೆ ಭಾರತ ‘ಸಕಾರಾತ್ಮಕ’ವಾಗಿ  ಪ್ರತಿಕ್ರಿಯಿಸಲಿದೆ ಎಂದು ಪಾಕಿಸ್ತಾನ ಗುರುವಾರ ವಿಶ್ವಾಸ ವ್ಯಕ್ತಪಡಿಸಿದೆ.

ಪಾಕಿಸ್ತಾನದಲ್ಲಿರುವ ಭಾರತದ ಹೈಕಮೀಷನರ್ ಟಿ ಸಿ ಎ ರಾಘವನ್ ಅವರೊಂದಿಗಿನ ಬುಧವಾರ ನಡೆದ ಸಭೆಯ ವೇಳೆ ಪ್ರಧಾನಿ  ನವಾಜ್ ಷರೀಫ್ ಅವರು ಈ ಪ್ರಸ್ತಾವದ ಬಗ್ಗೆ ಚರ್ಚಿಸಿದ್ದರು.

‘ಪಾಕಿಸ್ತಾನದಿಂದ ಹೊಮ್ಮಿರುವ ಪ್ರಸ್ತಾವಕ್ಕೆ ಪ್ರಾಮಾಣಿಕ ಹಾಗೂ ಸಕಾರಾತ್ಮಕ ಸ್ಪಂದನೆಯ ಪ್ರತಿಕ್ರಿಯೆ ಸಿಗಲಿದೆ ಎಂದು ನಾವು ಆಶಿಸಿದ್ದೇವೆ’ ಎಂದು ಪಾಕ್‌ನ ವಿದೇಶಾಂಗ ಕಾರ್ಯಾಲಯದ ವಕ್ತಾರ ಐಜಾಜ್‌ ಚೌಧರಿ ನುಡಿದಿದ್ದಾರೆ.

ADVERTISEMENT

‘ಇದು ನಮ್ಮ ಪ್ರಧಾನಿ ಅವರು ಮಾಡಿರುವ ಪ್ರಸ್ತಾವ. ಉಭಯ ರಾಷ್ಟ್ರಗಳು ಮಾತುಕತೆ ನಡೆಸುವ ಅಗತ್ಯವಿದೆ ಎಂದುಕೊಂಡಿದ್ದೇವೆ. ವಿವಾದಗಳನ್ನು ಚರ್ಚಿಸಲು ಹಾಗೂ ಬಗೆಹರಿಸಿಕೊಳ್ಳಲು ಮಾತುಕತೆಯ ಮೂಲಕ ಮಾತ್ರವೇ ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.

ಪಾಕ್‌ನ ನೆರೆಯ ರಾಷ್ಟ್ರಗಳು ಶಾಂತಿಯಿಂದಿರಬೇಕು ಎಂದು ಷರೀಫ್ ಆಶಿಸುತ್ತಾರೆ. ಅದಕ್ಕಾಗಿ  ಅವರು ಭಾರತವೂ ಸೇರಿದಂತೆ ಎಲ್ಲಾ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸುತ್ತಿದ್ದಾರೆ ಎಂದು ಚೌಧರಿ ಹೇಳಿದ್ದಾರೆ.

ಎನ್‌ಎಸ್‌ಎ ನಡುವೆ ಸಭೆ ನಡೆಸಲು ವ್ಯವಸ್ಥೆ ರಚನೆ ಸಂಬಂಧ ವಿದೇಶಾಂಗ ಕಾರ್ಯಾಲಯದ ವತಿಯಿಂದ ಅಧಿಕೃತವಾಗಿ ಪ್ರಸ್ತಾವ ರವಾನಿಸಲಾಗುವುದೇ ಎಂಬ ಪ್ರಶ್ನೆಗೆ ‘ ಪ್ರಧಾನಿ ಷರೀಫ್‌ಅವರು ಈ ವಿಷಯವನ್ನು ಭಾರತದ ಹೈಕಮೀಷನರ್ ಜೊತೆಗೆ ಚರ್ಚಿಸಿದ್ದಾರೆ. ಅಷ್ಟು ಅಧಿಕೃತ ಸಾಕು’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.