ADVERTISEMENT

ಏಕಪಕ್ಷೀಯ ದಾಳಿ ವಿರುದ್ಧ ಪುಟಿನ್ ಎಚ್ಚರಿಕೆ

ಸಿರಿಯಾ ಮೇಲೆ ಕಾರ್ಯಾಚರಣೆ ನಡೆಸದಿದ್ದರೆ ವಿಶ್ವಾಸಾರ್ಹತೆಗೆ ಧಕ್ಕೆ- ಅಮೆರಿಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST
ಏಕಪಕ್ಷೀಯ ದಾಳಿ ವಿರುದ್ಧ ಪುಟಿನ್ ಎಚ್ಚರಿಕೆ
ಏಕಪಕ್ಷೀಯ ದಾಳಿ ವಿರುದ್ಧ ಪುಟಿನ್ ಎಚ್ಚರಿಕೆ   

ಕೈರೊ (ಪಿಟಿಐ, ಐಎಎನ್‌ಎಸ್): ರಾಸಾಯನಿಕ ಅಸ್ತ್ರ ಬಳಸಿರುವ ಆರೋಪ ಹೊತ್ತಿರುವ ಸಿರಿಯಾ ಮೇಲೆ ಅಮೆರಿಕ ಮತ್ತು ಮಿತ್ರ ಪಡೆಗಳು ಏಕಪಕ್ಷೀಯವಾಗಿ ಸೇನಾ ಕಾರ್ಯಾಚರಣೆ ನಡೆಸುವುದರ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದಾರೆ.

`ವಿಶ್ವ ಸಂಸ್ಥೆಯ ಒಪ್ಪಿಗೆ ಪಡೆಯದೆ ನಡೆಸುವ ಯಾವುದೇ ಸೇನಾ ದಾಳಿಯು `ಅಪ್ರಚೋದಿತ ಆಕ್ರಮಣ'ವಾಗಲಿದೆ' ಎಂದು ರಷ್ಯಾದ `ಚಾನೆಲ್-1'ಗೆ ನೀಡಿರುವ ಸಂದರ್ಶನದಲ್ಲಿ ಪುಟಿನ್ ಹೇಳಿದ್ದಾರೆ.

ಸಿರಿಯಾ ಸರ್ಕಾರ ಮುಗ್ಧ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರಗಳಿಂದ ದಾಳಿ ನಡೆಸಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ವಿಶ್ವದ ಭದ್ರತಾ ಮಂಡಳಿಯ ಮುಂದೆ ಇಡುವಂತೆಯೂ ಅವರು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

ಸಿರಿಯಾದ ಮಿತ್ರ ರಾಷ್ಟ್ರವಾಗಿರುವ ರಷ್ಯಾದಲ್ಲಿ ಗುರುವಾರದಿಂದ `ಜಿ20' ರಾಷ್ಟ್ರಗಳ ಶೃಂಗಸಭೆ ನಡೆಯಲಿರುವುದರಿಂದ ತಮ್ಮ ನಿಲುವಿನಲ್ಲಿ ಮೃದು ಧೋರಣೆ ತಳೆದಿರುವ ಪುಟಿನ್, ಒಂದು ವೇಳೆ ಸಿರಿಯಾ ರಾಸಾಯನಿಕ ಅಸ್ತ್ರಗಳನ್ನು ಬಳಸಿದೆ ಎಂಬುದು ಸಾಬೀತಾದರೆ ಅದರ ವಿರುದ್ಧ ಕಾರ್ಯಾಚರಣೆ ನಡೆಸುವ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಲಿರುವ ನಿರ್ಣಯವನ್ನು ಬೆಂಬಲಿಸುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.

ಸಿರಿಯಾ ವಿರುದ್ಧ ಏಕಪಕ್ಷೀಯವಾಗಿ ಕಾರ್ಯಾಚರಣೆ ನಡೆಸುವುದನ್ನು ಚೀನಾವೂ ವಿರೋಧಿಸಿದೆ.

ವಿಶ್ವಾಸಾರ್ಹತೆಗೆ ಧಕ್ಕೆ: ಈ ನಡುವೆ, ಬಷರ್ ಅಲ್- ಅಸಾದ್ ನೇತೃತ್ವದ ಆಡಳಿತದ ವಿರುದ್ಧ ಸೇನಾ ದಾಳಿ ನಡೆಸದೇ ಹೋದರೆ, ಮಿತ್ರ ರಾಷ್ಟ್ರಗಳನ್ನು ಕಳೆದುಕೊಳ್ಳುವುದರ ಜೊತೆಗೆ ಜಗತ್ತಿನಲ್ಲಿ ತನ್ನ ವಿಶ್ವಾಸಾರ್ಹತೆಗೂ ಧಕ್ಕೆಯಾಗಲಿದೆ ಎಂದು ಅಮೆರಿಕ ಹೇಳಿದೆ.

`ಒಂದು ವೇಳೆ ಕ್ರಮ ಕೈಗೊಳ್ಳಲು ನಾವು ವಿಫಲರಾದರೆ ನಮ್ಮ ಮೇಲೆ ನಂಬಿಕೆ ಇಟ್ಟಿರುವ ಜನರ ಸಂಖ್ಯೆಯೂ ಕುಂಠಿತಗೊಳ್ಳಲಿದೆ' ಎಂದು  ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಜಾನ್ ಕೆರಿ ಹೇಳಿದ್ದಾರೆ.

ಕರಡು ನಿರ್ಣಯ ರಚನೆ
ವಾಷಿಂಗ್ಟನ್ ವರದಿ:  ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಸಂಬಂಧದ ನಿರ್ಣಯದ ಕರಡನ್ನು ಅಮೆರಿಕದ ಸೆನೆಟ್‌ನ ವಿದೇಶಿ ಸಂಬಂಧಗಳ ಸಮಿತಿಯು ರಚಿಸಿದ್ದು, 60 ದಿನಗಳ ಕಾರ್ಯಾಚರಣೆಗೆ ಸಮಿತಿ ಅನುಮತಿ ನೀಡಿದೆ ಎಂದು ಅಮೆರಿಕ ಕಾಂಗ್ರೆಸ್‌ನ ಆಪ್ತ ಮೂಲಗಳು ಹೇಳಿವೆ.

ಸಿರಿಯಾ ವಿರುದ್ಧ ಭೂಸೇನಾ ಕಾರ್ಯಾಚರಣೆ ನಡೆಸಲು ಅದು ಅನುಮತಿ ನೀಡಿಲ್ಲ. ಆದರೆ, ಕರಡು ನಿರ್ಣಯದಲ್ಲಿರುವ ಅಂಶಗಳು ಇನ್ನೂ ಬಹಿರಂಗಗೊಂಡಿಲ್ಲ.


ಪ್ರಮುಖ ಕಾಂಗ್ರೆಸ್ ನಾಯಕರ ಬೆಂಬಲ
ಸಿರಿಯಾ ಮೇಲೆ ದಾಳಿ ನಡೆಸುವ ಸಂಬಂಧ ಅಮೆರಿಕ ಅಧ್ಯಕ್ಷ ಒಬಾಮ ಅವರ ಪ್ರಸ್ತಾವನೆಗೆ  ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳಿಗೆ ಸೇರಿದ ಕಾಂಗ್ರೆಸ್‌ನ ಪ್ರಮುಖ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸೇನಾ ಕಾರ್ಯಾಚರಣೆಗೆ ಸಮ್ಮತಿ ಪಡೆಯುವ ಯತ್ನವಾಗಿ ಒಬಾಮ ಅವರು ರಿಪಬ್ಲಿಕನ್ ಪಕ್ಷದ ನಿಯಂತ್ರಣದಲ್ಲಿರುವ ಕೆಳಮನೆಯ ಸ್ಪೀಕರ್ ಜಾನ್ ಎ. ಬೊಹ್ನೆರ್ ಸೇರಿದಂತೆ ಕಾಂಗ್ರೆಸ್‌ನ ಹಲವು ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೇಸಿಗೆ ವಿರಾಮದ ಬಳಿಕ, ಸೆಪ್ಟೆಂಬರ್ 8ರಂದು (ಭಾನುವಾರ) ಅಮೆರಿಕದ ಕಾಂಗ್ರೆಸ್‌ನ ಕಲಾಪ ನಡೆಯಲಿದ್ದು, ಕಾರ್ಯಾಚರಣೆ ನಡೆಸುವ ಸಂಬಂಧ ಕಾಂಗ್ರೆಸ್ ಅಂದು ತೀರ್ಮಾನ ಕೈಗೊಳ್ಳಲಿದೆ.

ಅಮೆರಿಕನ್ನರ ವಿರೋಧ: ಸೇನಾ ಕಾರ್ಯಾಚರಣೆಗೆ ಹೆಚ್ಚಿನ ಅಮೆರಿಕನ್ನರು ವಿರೋಧ ವ್ಯಕ್ತಪಡಿಸಿದ್ದಾರೆ. ಎಬಿಸಿ ನ್ಯೂಸ್- ವಾಷಿಂಗ್ಟನ್ ಪೋಸ್ಟ್ ನಡೆಸಿರುವ ಜನಮತ ಸಂಗ್ರಹದಲ್ಲಿ ಜನರು ಸೇನಾ ದಾಳಿ ನಡೆಸುವುದನ್ನು ವಿರೋಧಿಸಿದ್ದಾರೆ.

`ಅಂತರರಾಷ್ಟ್ರೀಯ ಸಮುದಾಯದ ನಂಬಿಕೆಗೆ ಸವಾಲು'

ವಾಷಿಂಗ್ಟನ್ (ಪಿಟಿಐ): ಸಿರಿಯಾ ವಿರುದ್ಧ ಸೇನಾ ದಾಳಿ ನಡೆಸುವ ತಮ್ಮ ನಿಲುವು ಸಮರ್ಥಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಸಿರಿಯಾವು ಅಂತರರಾಷ್ಟ್ರೀಯ ಸಮುದಾಯದ ನಂಬಿಕೆಯನ್ನು ಪರೀಕ್ಷೆಗೆ ಒಡ್ಡಿದೆ ಎಂದು ಪ್ರತಿಪಾದಿಸಿದ್ದಾರೆ.

`ನನ್ನ ವಿಶ್ವಾಸಾರ್ಹತೆಗೆ ಯಾವುದೇ ತೊಂದರೆ ಇಲ್ಲ. ಆದರೆ, ಅಂತರರಾಷ್ಟ್ರೀಯ ಸಮುದಾಯದ ಮೇಲಿನ ನಂಬಿಕೆಗೆ ಸವಾಲು ಬಂದೊದಗಿದೆ. ಅಂತರರಾಷ್ಟ್ರೀಯ ನಿಯಮಗಳಿಗೆ ಮಹತ್ವ ಕೊಡಬೇಕು ಎಂದು ನಾವು ಸಾರಿ ಹೇಳುತ್ತಿರುವುದರಿಂದ ಅಮೆರಿಕ ಮತ್ತು ಕಾಂಗ್ರೆಸ್‌ನ ವಿಶ್ವಾಸಾರ್ಹತೆಗೆ ಸಂಕಷ್ಟ ಎದುರಾಗಿದೆ' ಎಂದು ಸ್ವೀಡನ್ ಪ್ರವಾಸದಲ್ಲಿರುವ ಒಬಾಮ ಹೇಳಿದ್ದಾರೆ.

3ನೇ ಮಹಾಯುದ್ಧ ನಡೆದರೂ ಸರಿಯೇ: ಸಿರಿಯಾ ತಿರುಗೇಟು
ಡಮಾಸ್ಕಸ್ (ಎಎಫ್‌ಪಿ):
ಅಮೆರಿಕ ನೇತೃತ್ವದ ಪಡೆಗಳು ನಡೆಸಲಿರುವ ಸಂಭಾವ್ಯ ದಾಳಿಗೆ ಪ್ರತೀಕಾರ ತೀರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿರಿಯಾ ಹೇಳಿದೆ. ಒಂದು ವೇಳೆ ಮೂರನೇ ಮಹಾಯುದ್ಧ ನಡೆದರೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ ಎಂದೂ ಸಿರಿಯಾ ತಿರುಗೇಟು ನೀಡಿದೆ.

ಎಎಫ್‌ಪಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸಿರಿಯಾದ ಸಹಾಯಕ ವಿದೇಶಾಂಗ ಸಚಿವ ಫೈಸಲ್ ಮುಕ್‌ದದ್, ಆಕ್ರಮಣದ ವಿರುದ್ಧ ಪ್ರತಿದಾಳಿ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಮೂರನೇ ವಿಶ್ವ ಯುದ್ಧ ನಡೆದರೂ ಸಿರಿಯಾ ಸರ್ಕಾರ ತನ್ನ ನಿಲುವನ್ನು ಬದಲಿಸುವುದಿಲ್ಲ. ಯಾವುದೇ ಸಿರಿಯಾ ಪ್ರಜೆ ತನ್ನ ದೇಶದ ಸ್ವಾತಂತ್ರ್ಯವನ್ನು ತ್ಯಾಗ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.