ಲಂಡನ್ (ಪಿಟಿಐ): ರಾತ್ರಿ ಸಮಯದಲ್ಲಿ ನಿಗದಿತವಾಗಿ ಏಳು ಗಂಟೆಗಳ ಸುಖ ನಿದ್ರೆ ಮಾಡಿ, ನಿಮ್ಮ ಮಿದುಳಿನ ಆಯಸ್ಸನ್ನು ಎರಡು ವರ್ಷ ಹೆಚ್ಚಿಸಿಕೊಳ್ಳಿ...!ಇದು ಜಾಹೀರಾತಲ್ಲ. ಅಮೆರಿಕದ ಸಂಶೋಧಕರ ತಂಡವೊಂದು ನಡೆಸಿದ ಪ್ರಯೋಗದಿಂದ ಹೊರ ಬಂದ ಫಲಿತಾಂಶ!
ಅಮೆರಿಕದ ಸಂಶೋಧಕರ ತಂಡವೊಂದು 70ರ ವೃದ್ಧೆಯರ ಮೇಲೆ ಈ ಸಂಶೋಧನೆ ನಡೆಸಿದೆ. ಆ ಪ್ರಕಾರ ವೃದ್ದೆಯೊಬ್ಬರು ರಾತ್ರಿವೇಳೆ ಏಳು ಗಂಟೆಗಳ ಕಾಲ ಸುಖವಾಗಿ ನಿದ್ರಿಸಿದರೆ, ಅವರ ಜ್ಞಾಪಕ ಶಕ್ತಿ ಹಾಗೂ ಏಕಾಗ್ರತೆಯಲ್ಲಿ ಏರಿಕೆಯಾಗಿದೆ. ಒಂಬತ್ತು ಗಂಟೆ ನಿದ್ದೆ ಮಾಡಿದ ವೃದ್ಧೆಯ ಮಿದುಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ರುವುದನ್ನು ಸಂಶೋಧಕರು ದಾಖಲಿಸಿರುವುದಾಗಿ `ಡೇಲಿ ಮೇಲ್~ ವರದಿ ಮಾಡಿದೆ.
`ಅತೀ ನಿದ್ದೆ ಮಾಡುವವರು ಹಾಗೂ ನಿದ್ದೆಗೆಡುವವರಿಗಿಂತ ರಾತ್ರಿ ವೇಳೆ ಏಳು ಗಂಟೆ ನಿದ್ರೆ ಮಾಡುವವರ ಮಿದುಳು ಕ್ರಿಯಾಶೀಲವಾಗಿದ್ದು, ಅವರಲ್ಲಿ ಏಕಾಗ್ರತೆಯೂ ಹೆಚ್ಚಾಗಿರುತ್ತದೆ. ಮಾತ್ರವಲ್ಲ, ಜೊತೆಗೆ ಎರಡು ವರ್ಷ ಆಯಸ್ಸು ಕೂಡ ಹೆಚ್ಚಾಗುತ್ತದೆ~ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಯ ಫಲಿತಾಂಶದಿಂದ ಬಲವಾಗಿ ನಂಬಿದ್ದಾರೆ.
ಇದಕ್ಕೂ ಮುನ್ನ ನಡೆಸಿದ ಸಂಶೋಧನೆಗಳಲ್ಲಿ `ಏಳು ಗಂಟೆಗಿಂತ ಹೆಚ್ಚು ಕಾಲ ನಿದ್ದೆ ಮಾಡಿದರೆ ತೂಕ ಹೆಚ್ಚಾಗುವ ಜೊತೆಗೆ ಹೃದ್ರೋಗ ಸಮಸ್ಯೆಗಳು ಹಾಗೂ ಮಧುಮೇಹ ರೋಗಕ್ಕೂ ಕಾರಣವಾಗುತ್ತದೆ~ ಎಂದು ತಿಳಿದುಬಂದಿತ್ತು. ಆದರೆ ಈ ಹೊಸ ಸಂಶೋಧನೆ ಮಾತ್ರ ಏಕಾಗ್ರತೆ ಸಮಸ್ಯೆ ಕುರಿತು ಬೆಳಕು ಚೆಲ್ಲಿದೆ.
ಈ ಸಂಶೋಧನೆಯನ್ನು ಕೆನಡಾದ ವ್ಯಾಂಕೊವರ್‌ನಲ್ಲಿ ಇತ್ತೀಚೆಗೆ ನಡೆದ ಅಲ್ಜಮೈರ್ ಸಂಘದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಲಾಗಿದೆ. ಐದು ವರ್ಷಗಳ ಕಾಲ ನಡೆಸಿದ ಈ ಅಧ್ಯಯನದಲ್ಲಿ 70ರ ಹರೆಯದ 15ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.