ADVERTISEMENT

ಐಎಸ್‌ ವಿರುದ್ಧ ಜಯ: ಇರಾಕ್‌ನಲ್ಲಿ ಸಂಭ್ರಮ

ಏಜೆನ್ಸೀಸ್
Published 10 ಡಿಸೆಂಬರ್ 2017, 19:30 IST
Last Updated 10 ಡಿಸೆಂಬರ್ 2017, 19:30 IST
ಬಾಗ್ದಾದ್‌ನಲ್ಲಿ ಭಾನುವಾರ ನಾಗರಿಕರು ರಾಷ್ಟ್ರಧ್ವಜ ಪ್ರದರ್ಶಿಸಿ ಸಂಭ್ರಮಿಸಿದರು  ಎಪಿ/ಪಿಟಿಐ
ಬಾಗ್ದಾದ್‌ನಲ್ಲಿ ಭಾನುವಾರ ನಾಗರಿಕರು ರಾಷ್ಟ್ರಧ್ವಜ ಪ್ರದರ್ಶಿಸಿ ಸಂಭ್ರಮಿಸಿದರು ಎಪಿ/ಪಿಟಿಐ   

ಬಾಗ್ದಾದ್‌: ಐಎಸ್ ವಿರುದ್ಧದ ಯುದ್ಧದಲ್ಲಿ ಜಯ ಸಾಧಿಸಲಾಗಿದೆ ಎಂದು ಇರಾಕ್‌ ಪ್ರಧಾನಿ ಹೈದರ್‌ ಅಲ್‌–ಅಬಾದಿ ಘೋಷಿಸಿದ ಬಳಿಕ ಭಾನುವಾರ ಇಲ್ಲಿ ಸೇನಾಪಡೆಗಳ ವಿಶೇಷ ಪಥಸಂಚಲನದ ಮೂಲಕ ಸಂಭ್ರಮಿಸಲಾಯಿತು.

ಬಾಗ್ದಾದ್‌ ನಗರದ ಕೇಂದ್ರ ಸ್ಥಾನದಲ್ಲಿ ಸೇನಾ ಪಡೆಗಳ ಪಥಸಂಚಲನ ನಡೆಸಿದಾಗ ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಿಮಾನಗಳ ಹಾರಾಟ ನಡೆಯಿತು.

2014ರಲ್ಲಿ ಇರಾಕ್‌ನ ಬಹುತೇಕ ಪ್ರದೇಶ ಮತ್ತು ಸಿರಿಯಾವನ್ನು ಐಎಸ್‌ ಸಂಘಟನೆ ವಶಪಡಿಸಿಕೊಂಡಿತ್ತು. ಇರಾಕ್‌ ಪಡೆಗಳು ನಡೆಸುತ್ತಿದ್ದ ಕಾರ್ಯಾಚರಣೆಗೆ ಅಮೆರಿಕ ನೇತೃತ್ವದ ಮೈತ್ರಿಕೂಟ ಬೆಂಬಲ ನೀಡಿತ್ತು. ಈ ಮೂಲಕ ಒಂದೊಂದಾಗಿ ಐಎಸ್‌ ವಶದಲ್ಲಿದ್ದ ಎಲ್ಲ ಪ್ರದೇಶಗಳನ್ನು ಮೂರು ವರ್ಷಗಳಲ್ಲಿ ವಶಪಡಿಸಿಕೊಂಡಿತು. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಯುದ್ಧ ಈಗ ಅಂತ್ಯವಾಗಿದೆ ಎಂದು ಶನಿವಾರ ಅಬಾದಿ ಪ್ರಕಟಿಸಿದ್ದರು.

ADVERTISEMENT

’ನಮ್ಮ ಸೇನಾ ಪಡೆಗಳು ಇರಾಕ್‌ ಮತ್ತು ಸಿರಿಯಾ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿವೆ. ಹೀಗಾಗಿ, ಐಎಸ್‌ ವಿರುದ್ಧ ಯುದ್ಧವನ್ನು ಅಂತ್ಯಗೊಳಿಸಲಾಗಿದೆ ಎಂದು ಘೋಷಿಸುತ್ತೇನೆ’ ಎಂದು ಅಬಾದಿ ತಿಳಿಸಿದ್ದರು.

ಇರಾಕ್‌ ವಿರುದ್ಧದ ಸೋಲು ಐಎಸ್‌ಗೆ ಭಾರಿ ಆಘಾತ ತಂದಿದೆ. ಸಿರಿಯಾ ಗಡಿಯಲ್ಲೂ ಇದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ಇನ್ನೂ ಬಾಂಬ್‌ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

* ನಮ್ಮ ಒಗ್ಗಟ್ಟು ಮತ್ತು ದೃಢ ನಿರ್ಧಾರದಿಂದ ಐಎಸ್‌  ಸಂಘಟನೆಯನ್ನು ಸೋಲಿಸಿದ್ದೇವೆ

–ಹೈದರ್‌ ಅಲ್‌–ಅಬಾದಿ, ಇರಾಕ್‌ ಪ್ರಧಾನಿ

ಐಎಸ್‌ ಇನ್ನೂ ಸೋತಿಲ್ಲ: ತೆರೆಸಾ ಮೇ

ಲಂಡನ್‌ (ಪಿಟಿಐ): ‘ಐಎಸ್‌ ಪ್ರಮುಖ ನೆಲೆಗಳನ್ನು ಕಳೆದುಕೊಂಡಿರಬಹುದು. ಆದರೆ, ಇನ್ನೂ ಸಂಪೂರ್ಣವಾಗಿ ಸೋತಿಲ್ಲ’ ಎಂದು ಬ್ರಿಟನ್‌ ಪ್ರಧಾನಿ ತೆರೆಸಾ ಮೇ ತಿಳಿಸಿದ್ದಾರೆ.

‘ಐಎಸ್‌ ಉಗ್ರ ಸಂಘಟನೆ ಇರಾಕ್‌ಗೆ ಅಪಾಯವೊಡುತ್ತದೆ. ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸುತ್ತದೆ. ಈ ಬಗ್ಗೆ ಇರಾಕ್‌ ಎಚ್ಚರವಹಿಸಬೇಕು’ ಎಂದು ತಿಳಿಸಿದ್ದಾರೆ.

‘ಐಎಸ್‌ ವಿರುದ್ಧ ಇರಾಕ್‌ ಜಯಸಾಧಿಸಿರುವುದು ಐತಿಹಾಸಿಕ ಕ್ಷಣವಾಗಿದೆ. ಇದರಿಂದ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.