ADVERTISEMENT

ಐದು ಜೋಡಿ ಬೃಹತ್‌ ಕಪ್ಪು ರಂಧ್ರಗಳು ಪತ್ತೆ

ಏಜೆನ್ಸೀಸ್
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ಐದು ಜೋಡಿ ಬೃಹತ್‌ ಕಪ್ಪು ರಂಧ್ರಗಳು ಪತ್ತೆ
ಐದು ಜೋಡಿ ಬೃಹತ್‌ ಕಪ್ಪು ರಂಧ್ರಗಳು ಪತ್ತೆ   

ವಾಷಿಂಗ್ಟನ್‌ : ಸೂರ್ಯನಿಗಿಂತ ಹಲವು ಲಕ್ಷಪಟ್ಟು ದ್ರವ್ಯರಾಶಿ ಹೊಂದಿರುವ ಐದು ಜೋಡಿ ಬೃಹತ್‌ ಕಪ್ಪು ರಂಧ್ರಗಳನ್ನು ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ. ಈ ಕಪ್ಪು ರಂಧ್ರಗಳ ಪತ್ತೆಯಿಂದ ಗುರುತ್ವಾಕರ್ಷಣೆ ಅಲೆಗಳ ಕುರಿತ ಮಹತ್ವದ ಸಂಶೋಧನೆಗೆ ನೆರವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಎರಡು ಗೆಲಾಕ್ಸಿಗಳ ನಡುವೆ ಡಿಕ್ಕಿ ಅಥವಾ ಸ್ಫೋಟ ಸಂಭವಿಸಿ, ಪರಸ್ಪರ ಬೆರೆತು ಈ ಜೋಡಿ ಕಪ್ಪುರಂಧ್ರಗಳು ರಚನೆಯಾಗಿವೆ.

ನಾಸಾದ ಚಂದ್ರ ಎಕ್ಸ್‌–ರೇ ವೀಕ್ಷಣಾಲಯ ಮತ್ತು ವೈಡ್‌–ಫೀಲ್ಡ್‌ ಇನ್ಫ್ರಾ ರೆಡ್‌ ಸ್ಕೈ ಎಕ್ಸ್‌ಪ್ಲೋರರ್‌ ಸರ್ವೆ’ ಹಾಗೂ ಅರಿಜೋನಾದ ಬೃಹತ್‌ ಬೈನಾಕ್ಯುಲರ್‌ ದೂರದರ್ಶಕ ನೆರವಿನಿಂದ ಇವುಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.

ADVERTISEMENT

‘ಖಗೋಳ ವಿಜ್ಞಾನಿಗಳು ಈಗಾಗಲೇ ಹಲವು ಕಪ್ಪುರಂಧ್ರಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಪರಸ್ಪರ ಬೆರೆತಿರುವ ಬೃಹತ್‌ ಗಾತ್ರದ ಜೋಡಿ ಕಪ್ಪುರಂಧ್ರಗಳನ್ನು ಪತ್ತೆ ಹಚ್ಚುವುದು ಕಷ್ಟ. ಈಗ ಇವು ಬೆಳಕಿಗೆ ಬಂದಿವೆ’ ಎಂದು ಅಮೆರಿಕದ ಜಾರ್ಜ್‌ ಮ್ಯಾಸನ್‌ ವಿಶ್ವವಿದ್ಯಾಲಯದ ಶೋಭಿತಾ ಸತ್ಯಪಾಲ್ ತಿಳಿಸಿದ್ದಾರೆ.

ಈ ರಂಧ್ರಗಳನ್ನು ಪತ್ತೆ ಮಾಡಲು ’ಸ್ಲೋನ್‌ ಡಿಜಿಟಲ್‌ ಸ್ಕೈ ಸರ್ವೆ’ ಸಂಸ್ಥೆಯ ಮಾಹಿತಿಯನ್ನು ವಿಜ್ಞಾನಿಗಳು ಬಳಸಿಕೊಂಡಿದ್ದರು. ಇದರಲ್ಲಿ ಈ ಎರಡು ಗೆಲಾಕ್ಸಿಗಳ ಕೇಂದ್ರ ಬಿಂದುಗಳ ನಡುವಿನ ಅಂತರ 30,000 ಜ್ಯೋತಿರ್ವರ್ಷಗಳಷ್ಟು ದೂರ ಇರಬಹುದು ಎಂದು ತಿಳಿಸಲಾಗಿತ್ತು. ವೈಸ್‌ ಖಗೋಳ ವೀಕ್ಷಣಾಲದ ಸಂಗ್ರಹಿಸಿರುವ ಮಾಹಿತಿಯಲ್ಲೂ ಇದೇ ಅಂತರವನ್ನು ತಿಳಿಸಲಾಗಿದೆ.

ಇವುಗಳಲ್ಲಿ ಅಧಿಕ ಪ್ರಮಾಣದ ದೂಳು ಮತ್ತು ಅನಿಲಗಳು ತುಂಬಿಕೊಂಡಿವೆ ಎಂದು ಚಂದ್ರ ಖಗೋಳ ವೀಕ್ಷಣಾಲಯದ ಎಕ್ಸ್‌–ರೇ ಮಾಹಿತಿ ಮತ್ತು ಇನ್‌ಫ್ರಾರೆಡ್‌ ವಿಕಿರಣ ಮಾಹಿತಿಯಲ್ಲಿ ತಿಳಿಸಲಾಗಿದೆ.

ಇನ್‌ಫ್ರಾರೆಡ್‌ ವಿಕಿರಣ ಮತ್ತು ಎಕ್ಸ್‌–ರೇ ವಿಧಾನಗಳು ಕಪ್ಪು ರಂಧ್ರಗಳ ಪತ್ತೆಗೆ ಪರಿಣಾಮಕಾರಿಯಾಗಿ ನೆರವಾಗುತ್ತವೆ ಎಂದು ಕೆನಡಾದ ವಿಕ್ಟೋರಿಯಾ ವಿಶ್ವವಿದ್ಯಾಲಯದ ಸಾರಾ ಎಲ್ಲಿಸನ್‌ ಅಭಿಫ್ರಾಯಪಟ್ಟಿದ್ದಾರೆ.

ಇವುಗಳ ಕೇಂದ್ರಬಿಂದುಗಳು ಪರಸ್ಪರ ಬೆರೆಯುವ ಪ್ರಕ್ರಿಯೆಯಲ್ಲಿ ಅಗಾಧ ಪ್ರಮಾಣದ ಶಕ್ತಿ ಬಿಡುಗಡೆ ಆಗುವುದರಿಂದ ಗುರುತ್ವಾಕರ್ಷಣ ಅಲೆಗಳು ಉಂಟಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.