ADVERTISEMENT

ಐರೋಪ್ಯ ಆರ್ಥಿಕ ಬಿಕ್ಕಟ್ಟು ಚರ್ಚೆ:ಒಬಾಮ-ಸಿಂಗ್ ಮಾತುಕತೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST
ಐರೋಪ್ಯ ಆರ್ಥಿಕ ಬಿಕ್ಕಟ್ಟು ಚರ್ಚೆ:ಒಬಾಮ-ಸಿಂಗ್ ಮಾತುಕತೆ
ಐರೋಪ್ಯ ಆರ್ಥಿಕ ಬಿಕ್ಕಟ್ಟು ಚರ್ಚೆ:ಒಬಾಮ-ಸಿಂಗ್ ಮಾತುಕತೆ   

ವಾಷಿಂಗ್ಟನ್ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಐರೋಪ್ಯ ವಲಯದ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಚರ್ಚಿಸಿದ್ದಾರೆ.

ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ.ಕೃಷ್ಣ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ನಡೆಸಿದ ಮೂರನೇ ಭಾರತ-ಅಮೆರಿಕ ಸೇನಾ ಸಂಬಂಧಿ  ಮಾತುಕತೆ ಹಿನ್ನೆಲೆಯಲ್ಲಿ ಈ ಉಭಯ ನಾಯಕರ ಚರ್ಚೆ ನಡೆದಿದೆ.

ಚರ್ಚೆಯ ವೇಳೆ ಐರೋಪ್ಯ ವಲಯದಿಂದ ಎದುರಾಗುತ್ತಿರುವ ಆಘಾತ      ಗಳನ್ನು ಎದುರಿಸುವಲ್ಲಿ ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಜೊತೆಗೂಡಿ ಕಾರ್ಯನಿರ್ವಹಿಸುವ ಕುರಿತು ಉಭಯ ನಾಯಕರು ಸಮ್ಮತಿ ವ್ಯಕ್ತಪಡಿಸಿದರು ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

ಇದರೊಂದಿಗೆ ಈ ತಿಂಗಳ 18ರಂದು ಆರಂಭಗೊಳ್ಳಲಿರುವ ಎರಡು ದಿನಗಳ ಜಿ-20 ಶೃಂಗಸಭೆಯ ಯಶಸ್ಸಿಗಾಗಿ ಜೊತೆಗೂಡಿ ಕಾರ್ಯನಿರ್ವಹಿಸಲು ಸಹ ಉಭಯ ನಾಯಕರು ಸಹಮತ ಸೂಚಿಸಿದ್ದಾರೆ.  ಎರಡು ದಿನಗಳ ಕಾಲ ನಡೆಯಲಿರುವ ಶೃಂಗಸಭೆಯಲ್ಲಿ ಐರೋಪ್ಯ ಆರ್ಥಿಕ ಬಿಕ್ಕಟ್ಟು ಮುಖ್ಯ ಚರ್ಚಾ ವಿಷಯವಾಗಲಿದೆಯಲ್ಲದೆ, ಚೀನಾದ ಆರ್ಥಿಕ ಕುಸಿತ ಹಾಗೂ ಜಾಗತಿಕ ಆರ್ಥಿಕತೆಗೆ ಸವಾಲೊಡ್ಡುತ್ತಿರುವ ಭಾರತದ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಐರೋಪ್ಯ ಒಕ್ಕೂಟದ ಸದ್ಯದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಗ್ರೀಸ್ ಮತ್ತು ಸ್ಪೇನ್‌ನಂತಹ ರಾಷ್ಟ್ರಗಳು ಮೂರನೇ ರಾಷ್ಟ್ರದ ನೆರವಿಲ್ಲದೆ ಸಾಲದ ಹೊರೆಯಿಂದ ಹೊರ      ಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಹೂಡಿಕೆಗೆ ಕರೆ: ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಬಲಾಢ್ಯವಾಗುತ್ತಿರುವ ಭಾರತ ಮತ್ತು ಚೀನಾಕ್ಕೆ ಸ್ಪರ್ಧೆ ಒಡ್ಡುವ ಮೂಲಕ ಜಾಗತಿಕ ವಲಯದಲ್ಲಿ ಮುಂಚೂಣಿ ಸ್ಥಾನವನ್ನು ಉಳಿಸಿಕೊಳ್ಳಲು ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಬಂಡವಾಳ ಹೂಡಬೇಕೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕರೆಯಿತ್ತರು.

ಒಹಿಯೋದ ಕ್ಲೀವ್‌ಲೆಂಡ್‌ನಲ್ಲಿ ಅಮೆರಿಕದ ಆರ್ಥಿಕತೆ ಕುರಿತು ಮಾತನಾಡುತ್ತಾ ಒಬಾಮ ಈ ವಿಷಯ ತಿಳಿಸಿದರು. `ಜಾಗತಿಕ ಸ್ಪರ್ಧೆ ತೀವ್ರವಾಗುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕವು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಿಂದ ದೂರ ಸರಿಯುವುದು ಸರಿಯಲ್ಲ. ಬದಲಾಗಿ ಈ ಕ್ಷೇತ್ರದಲ್ಲಿ ಇನ್ನಷ್ಟು ಬಂಡವಾಳ  ಹೂಡುವುದು ಅಗತ್ಯ. ಆ ಮೂಲಕ ಈ ಶತಮಾನದ ಬಹು ದೊಡ್ಡ ಆವಿಷ್ಕಾರಗಳು ಅಮೆರಿಕದಲ್ಲಿ ನಡೆಯುವಂತಾಗಲಿ~ ಎಂದರು.

ಆದರೆ `ಹೂಡಿಕೆ ಎಂದರೆ ಯಾವುದೇ ಯೋಜನೆ ಅಥವಾ ಹೊಸ ಆಲೋಚನೆಗಳಿಗೆ ಸುಮ್ಮನೆ ಹಣ ಸುರಿಯುವುದು ಎಂದರ್ಥವಲ್ಲ. ಬದಲಾಗಿ ನಮ್ಮ ಉದಯೋನ್ಮುಖ ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳ ಶ್ರಮಕ್ಕೆ ಬೆಂಬಲ ಸೂಚಿಸುವುದು ಇದರರ್ಥ~ ಎಂದರು.

ಪೋಲಿಯೊ: ಹಿಲರಿ ಶ್ಲಾಘನೆ
ಪೋಲಿಯೊ ಸಂಪೂರ್ಣ ನಿರ್ಮೂಲನೆಯಲ್ಲಿ ಭಾರತ ಮತ್ತು ಇಥಿಯೋಪಿಯಾಗಳು ಇತರ ರಾಷ್ಟ್ರಗಳಿಗೆ ಮಾದರಿಯಾಗಿವೆ ಎಂದು ಅಮೆರಿಕ ಶ್ಲಾಘಿಸಿದೆ.  

`ಒಂದೂ ಪೋಲಿಯೊ ಪ್ರಕರಣ ಪತ್ತೆಯಾಗದ ಸಾಧನೆ ಹಿಂದೆ ಭಾರತ ಮತ್ತು ಇಥಿಯೋಪಿಯಾದ ಯತ್ನ ಇದೆ. ಪೋಲಿಯೊ ಮುಕ್ತವಾದ ಭಾರತ ನಿಜಕ್ಕೂ ಅಭಿನಂದಾನಾರ್ಹ~ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮುಕ್ತ ಕಂಠದಿಂದ ಹೊಗಳಿದ್ದಾರೆ.

`ಶಿಶುಗಳ ಮರಣ ಪ್ರಮಾಣದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದ ಈ ಎರಡೂ ರಾಷ್ಟ್ರಗಳು ಸಮರ್ಥವಾಗಿ ಸವಾಲನ್ನು ಮೆಟ್ಟಿ ನಿಂತಿವೆ~ ಎಂದು ಅವರು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT