ADVERTISEMENT

ಐವರಿಕೋಸ್ಟ್‌ನಲ್ಲಿ ಅರಾಜಕತೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 18:30 IST
Last Updated 9 ಮಾರ್ಚ್ 2011, 18:30 IST

ನೈರೋಬಿ (ಡಿಪಿಎ): ಐವರಿ ಕೋಸ್ಟ್ ಅಧ್ಯಕ್ಷ ಲಾರೆಂಟ್ ಬಾಗಬೊ ಆಡಳಿತದ ವಿರುದ್ಧ ಅಬಿದ್ಜಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದ್ದು ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿದ್ದಾರೆ.

ಕಳೆದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರ ಕಳೆದಕೊಂಡಿದ್ದರೂ ತಮ್ಮ ವಿರೋಧಿಗೆ  ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿರುವ ಬಾಗಬೊ ವರ್ತನೆಯನ್ನು ಖಂಡಿಸಿ  ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಕಳೆದ ಗುರುವಾರ ಇದೇ ರೀತಿಯ ಪ್ರತಿಭಟನೆ ಸಂದರ್ಭದಲ್ಲಿ ಆರು ಮಹಿಳೆಯರನ್ನು ಹತ್ಯೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಮಂಗಳವಾರ ಟ್ರೆಸೆವಿಲೆಯಲ್ಲಿ ರ್ಯಾಲಿ ನಡೆಸುತ್ತಿದ್ದವರ ಮೇಲೆ ಬಾಗಬೊ ಪರ ಸೈನಿಕರು ಗುಂಡಿನ ಮಳೆಗರೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ನಡೆಯುತ್ತಿರುವ ಕಾದಾಟದಲ್ಲಿ ಇದುವರೆಗೆ 365 ಜನರ ಹತ್ಯೆಯಾಗಿದೆ. ಮತ್ತು ಸಾವಿರಾರು ಜನರು ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದಲ್ಲಿ ಮತ್ತೊಮ್ಮೆ  ನಾಗರಿಕರು ದಂಗೆ ಏಳಬಹುದು ಎಂದು ವಿಶ್ವಸಂಸ್ಥೆ ವೀಕ್ಷಕರು ಎಚ್ಚರಿಕೆ ನೀಡಿದ್ದಾರೆ. 2002ರಲ್ಲಿ ನಡೆದ ದಂಗೆಯಿಂದಾಗಿ ದೇಶದ ವಿಭಜನೆಯಾಯಿತು.

ಸೈನಿಕರೊಂದಿಗೆ ಸೋಮವಾರ ತೀವ್ರ ಸಂಘರ್ಷ ನಡೆಸಿ ದೇಶದ ಪಶ್ಚಿಮ ಭಾಗದಲ್ಲಿರುವ ಮೂರನೇ ದೊಡ್ಡ ನಗರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಉತ್ತರ ಭಾಗದ ಬಂಡುಕೋರರ ಗುಂಪು ‘ನ್ಯೂ ಫೋರ್ಸ್’ ತಿಳಿಸಿದೆ.

ಜಪಾನ್‌ನಲ್ಲಿ ಭೂಕಂಪ- ಸುನಾಮಿ ಆತಂಕ
ಟೋಕಿಯೊ (ಎಎಫ್‌ಪಿ):
ಜಪಾನ್ ಕಡಲ ಕಿನಾರೆಯಲ್ಲಿ  ಬುಧವಾರ ಭೂಕಂಪ ಸಂಭವಿಸಿದ್ದು, ಟೋಕಿಯೊ ನಗರದ ಸುತ್ತಮುತ್ತಲಿನ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ಭೂಕಂಪದ ಪರಿಣಾಮವಾಗಿ ಸಣ್ಣ ಪ್ರಮಾಣದಲ್ಲಿ ಸುನಾಮಿಯು ಕಾಣಿಸಿಕೊಂಡಿದ್ದು ನಾಗರಿಕರಲ್ಲಿ ಆತಂಕಗೊಂಡಿದ್ದರು.ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.3 ಇದ್ದರೂ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.