ADVERTISEMENT

ಒಡನಾಡಿಯ ಮಂಡೇಲಾ ಗುಣಗಾನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ಜೋಹಾನ್ಸ್‌ಬರ್ಗ್‌ (ಐಎಎನ್‌ಎಸ್‌): ‘ನೀವು ತೋರಿದ ಎಣೆ ಇಲ್ಲದ ಪ್ರೀತಿ, ನಿಮ್ಮ ಸರಳತೆ, ಪ್ರಾಮಾಣಿಕತೆ, ಸೇವಾ ಮನೋಭಾವ, ವಿನಮ್ರತೆ, ಕಾಳಜಿ, ಧೈರ್ಯ, ದೂರದೃಷ್ಟಿ, ಸಹನೆ, ಸಮಾನತೆ ಹಾಗೂ ನ್ಯಾಯಪರತೆಗಳು ನನಗೆ ಹಾಗೂ ಜಗತ್ತಿನ ಕೋಟ್ಯಂತರ ಜನರಿಗೆ ಅಪಾರ ನಿರಂತರ ಶಕ್ತಿಯ ಸೆಲೆಗಳು...’

ಮಂಡೇಲಾ ಅವರೊಟ್ಟಿಗೇ 26 ವರ್ಷಗಳ ಕಾಲ ಜೈಲಿನಲ್ಲಿದ್ದ, ಧೀಮಂತ ನಾಯಕನ 67 ವರ್ಷಗಳ ಒಡನಾಡಿ ಯಾದ ಭಾರತೀಯ ಮೂಲದ ವರ್ಣಭೇದ ವಿರೋಧಿ ಹೋರಾಟಗಾರ ಅಹಮ್ಮದ್‌ ಕತ್ರಾದಾ ಆಡಿರುವ ನುಡಿಗಳಿವು. ಇವರಿಬ್ಬರೂ ಎಷ್ಟು ನಿಕಟರೆಂದರೆ ಪರಸ್ಪರ ಮಾತಾಡಿಕೊಳ್ಳುವಾಗ ಒಬ್ಬರನ್ನೊಬ್ಬರು ‘ಮದಾಲಾ’ (ವೃದ್ಧ ವ್ಯಕ್ತಿ) ಎಂದೇ ಸಂಬೋಧಿಸಿ ಕೊಳ್ಳುತ್ತಿದ್ದರು.

ಮಂಡೇಲಾ ಅವರು ನಂಬಿದ್ದ ಆದರ್ಶಗಳು ಹಾಗೂ ಜೀವನ ಮೌಲ್ಯ ಗಳನ್ನು ಸಾಕಾರಗೊಳಿಸುವ ಹೋರಾಟ ದಲ್ಲಿ ಭಾಗಿಯಾಗಲು ಸಂಕಲ್‍ಪ ತೊಟ್ಟಿದ್ದ ಕತ್ರಾದಾ, ಉದಾತ್ತ ರಾಜಕೀಯ ಹೋರಾಟಗಾರನ ಅಗಲಿಕೆಯಿಂದ ತಮ್ಮಲ್ಲಿ ಅನಾಥ ಹಾಗೂ ಒಬ್ಬಂಟಿ ಭಾವ ಮೂಡಿದೆ ಎಂದು ದುಃಖಿಸಿದ್ದಾರೆ.

‘ನಿಮ್ಮ ಅಗಲಿಕೆಯ ಆಘಾತಕಾರಿ ಸುದ್ದಿಗೆ ಸಾಕ್ಷಿಯಾಗುತ್ತೇನೆಂಬುದನ್ನು ನಾನು ಕಲ್ಪನೆಯಲ್ಲೂ ಯೋಚಿಸಿರಲಿಲ್ಲ. ಕಷ್ಟ ಕಾಲದಲ್ಲಿ ಹಾಗೂ ಸುಖದ ಗಳಿಗೆಗಳಲ್ಲಿ ನಿಮ್ಮೊಂದಿಗಿದ್ದ ಭಾಗ್ಯ ನನ್ನದಾಗಿತ್ತು. ಕೆಲವೊಮ್ಮೆ ಸಾಧಿಸಲು ಅಸಾಧ್ಯವೆನ್ನಿಸಿದ ಹಲವಾರು ಸವಾಲು ಗಳನ್ನೆದುರಿಸಿದ ಸುದೀರ್ಘ ಒಡೆತನ ನಮ್ಮದಾಗಿತ್ತು. ಆದರೂ ನಾವು ಎಲ್ಲೂ ತಪ್ಪೆಸಗಲಿಲ್ಲ. ನಿಮ್ಮಂತಹ ಹಾಗೂ ವಾಲ್ಟರ್‌ ಅವರಂತಹ ಧೀಮಂತ ನಾಯ ಕರು ನಾವು ಸಾಗುವ ಹಾದಿಯಲ್ಲಿ ದೀವಟಿಗೆಗಳಾಗಿ ನಮ್ಮ ಗುರಿ ಹಾಗೂ ಭವಿಷ್ಯವನ್ನು ಭದ್ರವಾಗಿರಿಸಿದ್ದೀರಿ...’ ಎಂದು ಬಣ್ಣಿಸಿದ್ದಾರೆ.

ತಮ್ಮ ಬದುಕಿನಲ್ಲಿ ಸಮಾಧಾನ, ಸುರಕ್ಷತೆ ಹಾಗೂ ಸಲಹೆಗಳಿಗಾಗಿ ತಾವು ಯಾವತ್ತೂ ಮಂಡೇಲಾ ಅವರನ್ನು ಎದುರು ನೋಡುತ್ತಿದ್ದುದಾಗಿಯೂ ತಿಳಿಸಿದ್ದಾರೆ. ‘ನಾವು ದುಃಖಸಾಗರದಲ್ಲಿ ಮುಳುಗಿ ರುವುದರ ನಡುವೆಯೂ, ಜೀವನ ದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಕ್ಕಾಗಿ ನಿಮಗೆ ಹೆಮ್ಮೆಯಿಂದ ಹಾಗೂ ಕೃತಜ್ಞತೆಯಿಂದ ವಂದನೆಗಳನ್ನು ಸಲ್ಲಿಸುತ್ತೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.