ADVERTISEMENT

ಒಬಾಮ ಆಡಳಿತಕ್ಕೆ ಮುಜುಗರ

ಲಕ್ಷಾಂತರ ನಾಗರಿಕರ ದೂರವಾಣಿ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ಲಂಡನ್/ವಾಷಿಂಗ್ಟನ್ (ಪಿಟಿಐ):  ಅಮೆರಿಕ ಸರ್ಕಾರ ಅಲ್ಲಿನ ಪ್ರಮುಖ ದೂರವಾಣಿ ಕಂಪೆನಿಯಾದ ವೆರಿಝೋನ್‌ನ ಲಕ್ಷಾಂತರ ಗ್ರಾಹಕರ ದೂರವಾಣಿ ದಾಖಲೆಗಳನ್ನು ನಿತ್ಯವೂ ಸಂಗ್ರಹಿಸುತ್ತಿದೆ ಎಂಬ ಸತ್ಯ ಈಗ ಬಯಲಾಗಿದ್ದು, ಒಬಾಮ ಆಡಳಿತದ ಈ ಕ್ರಮದ ವಿರುದ್ಧ  ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಅಮೆರಿಕದ ಉನ್ನತ ನ್ಯಾಯಾಲಯವೊಂದರ ಆದೇಶದ ಅನ್ವಯ ಎಫ್‌ಬಿಐ ಏಪ್ರಿಲ್‌ನಿಂದ ಲಕ್ಷಾಂತರ ಜನರ ದೂರವಾಣಿ ವಿವರ ಕಲೆ ಹಾಕುತ್ತಿದೆ. ಈ ಕುರಿತ ವರದಿ ಬ್ರಿಟನ್‌ನ `ಗಾರ್ಡಿಯನ್' ಪತ್ರಿಕೆಯಲ್ಲಿ ಗುರುವಾರ ಪ್ರಕಟಗೊಂಡಿದ್ದು, ಅಮೆರಿಕದಲ್ಲಿ ಕೋಲಾಹಲ ಸೃಷ್ಟಿಸಿದೆ.

ಅಮೆರಿಕದ ವಿದೇಶಿ ಬೇಹುಗಾರಿಕಾ ಕೋರ್ಟ್ (ಎಫ್‌ಐಎಸ್‌ಎ) ಏಪ್ರಿಲ್ 25ರಂದು ಎಫ್‌ಬಿಐಗೆ ದೂರವಾಣಿ ದಾಖಲೆ ಸಂಗ್ರಹಿಸುವಂತೆ ಆದೇಶ ನೀಡಿತ್ತು. ಜುಲೈ 19ರವರೆಗೆ ಮೂರು ತಿಂಗಳ ಕಾಲ ಎಲ್ಲ ದೂರವಾಣಿಗಳ ಕರೆಗಳ ಮಾಹಿತಿ ಪಡೆಯುವಂತೆ ಸೂಚಿಸಿತ್ತು.

ವೆರಿಝೋ, ತನ್ನ ಎಲ್ಲ ದೂರವಾಣಿ ಗ್ರಾಹಕರು ಅಮೆರಿಕದೊಳಗೆ ಮಾಡಿದ ಕರೆಗಳು ಹಾಗೂ ಅಮೆರಿಕದಿಂದ ಬೇರೆ ದೇಶಗಳಿಗೆ ಮಾಡಿದ ದೂರವಾಣಿ ಕರೆಗಳ ವಿವರಗಳನ್ನು ಎಫ್‌ಬಿಐಗೆ ನೀಡಬೇಕು. ಸಂಭಾಷಣೆಯ ವಿವರದ ಹೊರತಾಗಿ, ಎರಡೂ ಬದಿಯ ದೂರವಾಣಿ ಸಂಖ್ಯೆಗಳು, ಕರೆ ಮಾಡಲು ತೆಗೆದುಕೊಂಡ ಅವಧಿ ಮತ್ತು ಸಮಯವನ್ನು ಅದು ಎಫ್‌ಬಿಐಗೆ ತಿಳಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ಹೇಳಲಾಗಿತ್ತು.

ರಹಸ್ಯ ಸರ್ಕಾರಿ ಮಾಹಿತಿಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಅಸೋಸಿಯೇಟೆಡ್ ಪ್ರೆಸ್‌ನ ವರದಿಗಾರರು ಮತ್ತು ಸಂಪಾದಕರ ಎರಡು ತಿಂಗಳ ದೂರವಾಣಿ ದಾಖಲೆಗಳನ್ನು ನ್ಯಾಯಾಂಗ ಇಲಾಖೆ ಸಂಗ್ರಹಿಸಿತ್ತು.  ಈ ಬಗ್ಗೆ ಒಬಾಮ ಆಡಳಿತದ ವಿರುದ್ಧ ಭಾರಿ ಟೀಕೆ ಕೇಳಿಬರುತ್ತಿದ್ದ ಸಂದರ್ಭದಲ್ಲೇ ಈ ಹೊಸ ಪ್ರಕರಣ ಬಹಿರಂಗಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT