ADVERTISEMENT

ಕಠಿಣ ವಲಸೆ ನೀತಿ ಪ್ರಸ್ತಾವ

ಸಾವಿರಾರು ಭಾರತೀಯರಿಗೆ ಅನನುಕೂಲ ಸಾಧ್ಯತೆ

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಕಠಿಣ ವಲಸೆ ನೀತಿ ತತ್ವಗಳನ್ನು ಒಳಗೊಂಡ ಪಟ್ಟಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಕಾಂಗ್ರೆಸ್‌ಗೆ (ಸಂಸತ್ತು) ಕಳುಹಿಸಿದ್ದಾರೆ.

ಗ್ರೀನ್ ಕಾರ್ಡ್ ನೀಡಲು ಪಾಯಿಂಟ್ ಆಧರಿತ ವ್ಯವಸ್ಥೆ, ವಲಸೆ ನಿಯಂತ್ರಣ ಮತ್ತು ಗಡೀಪಾರು ತ್ವರಿತಗೊಳಿಸುವ ಪ್ರಮುಖ ಅಂಶಗಳು ಇದರಲ್ಲಿವೆ. ಜೊತೆಗೆ ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಹಣ ನಿಗದಿ ಮತ್ತು ಒಂಟಿಯಾಗಿ ಅಮೆರಿಕ ಪ್ರವೇಶಿಸುವ ಅಪ್ತಾಪ್ತ ವಯಸ್ಸಿನವರನ್ನು ನಿಯಂತ್ರಿಸುವ ಅಂಶಗಳೂ ಈ ಪಟ್ಟಿಯಲ್ಲಿವೆ.

ಅರ್ಹತೆ ಆಧರಿತ ವಲಸೆ ವ್ಯವಸ್ಥೆಯನ್ನು ಈ ನಿಯಮಗಳು ಸ್ಥಾಪಿಸಲಿವೆ. ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನುರಿತ ಕೆಲಸಗಾರರಿಗೆ ಇದರಿಂದ ನೆರವಾಗಲಿದೆ. ಆದರೆ ತಮ್ಮ ವಯಸ್ಸಾದ ತಂದೆ, ತಾಯಿಯನ್ನು ಕರೆಸಿಕೊಳ್ಳಲು ಬಯಸುತ್ತಿರುವ ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಭಾರತ ಸಂಜಾತ ಅಮೆರಿಕನ್ನರಿಗೆ ಹೊಡೆತ ನೀಡುವ ಸಾಧ್ಯತೆಯಿದೆ.

ADVERTISEMENT

ಆದರೆ ಸಂಸತ್ತಿನ ಡೆಮಾಕ್ರಟಿಕ್ ಪಕ್ಷದ ಮುಖಂಡರು ಈ ಬೇಡಿಕೆಗಳನ್ನು ಖಂಡಿಸಿದ್ದಾರೆ. ತರುಣ ವಲಸಿಗರನ್ನು (ಕನಸುಗಾರರು) ದೇಶದಲ್ಲೇ ಉಳಿಸಿಕೊಳ್ಳುವ ಆಶಾಭಾವವನ್ನು ಅವರು ವ್ಯಕ್ತಪಡಿಸಿದ್ದಾರೆ.

ಅರ್ಹತೆ ಆಧರಿತ ವ್ಯವಸ್ಥೆ– ಟ್ರಂಪ್ ಸಮರ್ಥನೆ: ದಶಕಗಳಿಂದಲೂ ಕಡಿಮೆ ಕೌಶಲದ ಜನರ ವಲಸೆಯಿಂದಾಗಿ ನಿರುದ್ಯೋಗ ಸಮಸ್ಯೆ ಹಾಗೂ ದೇಶದ ಸಂಪನ್ಮೂಲಗಳ ಮೇಲೆ ಹೊಡೆತ ಬಿದ್ದಿದೆ ಎಂದು ಡೊನಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಅಮೆರಿಕ, ಟರ್ಕಿ: ಪರಸ್ಪರ ವೀಸಾ ಸೇವೆ ರದ್ದು
ಟರ್ಕಿಯಲ್ಲಿರುವ ಅಮೆರಿಕ ದೂತವಾಸ ಕಚೇರಿಯ ಸ್ಥಳೀಯ ನೌಕರನನ್ನು ಟರ್ಕಿ ಸರ್ಕಾರ ಬಂಧಿಸಿದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಪರಸ್ಪರರ ವೀಸಾ ಸೇವೆಯನ್ನು ಎರಡೂ ದೇಶಗಳು ರದ್ದುಗೊಳಿಸಿವೆ.

ಟರ್ಕಿಯಲ್ಲಿರುವ ಅಮೆರಿಕ ದೂತವಾಸ ಸಿಬ್ಬಂದಿಯ ಭದ್ರತೆ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಇರುವ ಬದ್ಧತೆಯ ಮೌಲ್ಯಮಾಪನ ಮಾಡಲು ಇತ್ತೀಚಿನ ಕೆಲ ಘಟನೆಗಳು ಕಾರಣವಾಗಿವೆ’ ಎಂದು ಅಂಕಾರದಲ್ಲಿರುವ ಅಮೆರಿಕ ದೂತವಾಸ ಕಚೇರಿ ಹೇಳಿಕೊಂಡಿದ್ದು, ತನ್ನ ನಡೆ ಸಮರ್ಥಿಸಿಕೊಂಡಿದೆ.

‘ತಕ್ಷಣದಿಂದ ಜಾರಿಗೆ ಬರುವಂತೆ ಟರ್ಕಿಯಲ್ಲಿರುವ ಎಲ್ಲ ರಾಜತಾಂತ್ರಿಕ ಕಚೇರಿಗಳಲ್ಲಿ ವಲಸೆಯೇತರ ವೀಸಾ ನೀಡಿಕೆ ಪ್ರಕ್ರಿಯೆಯನ್ನು ರದ್ದುಗೊಳಿಸುತ್ತಿದ್ದೇವೆ’ ಎಂದು ದೂತಾವಾಸ ಕಚೇರಿ ಭಾನುವಾರ ತಿಳಿಸಿದೆ.

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವವರಿಗೆ ವಲಸೆ ವೀಸಾ ನೀಡಲಾಗುತ್ತದೆ. ಆದರೆ ಅಮೆರಿಕಕ್ಕೆ ಪ್ರವಾಸ, ವಿದ್ಯಾಭ್ಯಾಸ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ, ವ್ಯಾಪಾರ ಅಥವಾ ಇತರೆ ತಾತ್ಕಾಲಿಕ ಕೆಲಸಕ್ಕೆ ತೆರಳುವವರಿಗೆ ವಲಸೆಯೇತರ ವೀಸಾ ನೀಡಲಾಗುತ್ತದೆ.

ಹೇಳಿಕೆಯನ್ನೇ ಕದ್ದ ಟರ್ಕಿ: ಅತ್ತ ಅಮೆರಿಕದಲ್ಲಿರುವ ಟರ್ಕಿ ದೂತವಾಸ ಕಚೇರಿ ಕೂಡ ತಿರುಗೇಟು ನೀಡಲು ಎರಡು ಹೇಳಿಕೆಗಳನ್ನು ಬಿಡುಗಡೆಗೊಳಿಸಿದೆ. ಅಮೆರಿಕ ದೂತವಾಸ ಕಚೇರಿ ಹೊರಡಿಸಿದ ಪ್ರಕಟಣೆಯ ಅಕ್ಷರಕ್ಷರವನ್ನು ಅನುಕರಿಸಿ ಟರ್ಕಿ ದೂತವಾಸ ಕಚೇರಿಯ ಹೇಳಿಕೆಗಳನ್ನು ತಯಾರಿಸಲಾಗಿದೆ.

ಪಾಸ್‌ಪೋರ್ಟ್‌ನಲ್ಲಿರುವ ವೀಸಾಗೆ ಮಾತ್ರ ನಿರ್ಬಂಧ ಅನ್ವಯವಾಗುತ್ತದೆ ಎಂದು ಟರ್ಕಿ ತನ್ನ ಮೊದಲ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಎರಡನೇ ಪ್ರಕಟಣೆಯಲ್ಲಿ ‘ಸ್ಟಿಕ್ಕರ್ ವೀಸಾ’ಗಳಿಗೆ ಎಂಬ ಪದ ಬಳಸಿದೆ. ಪಾಸ್‌ಪೋರ್ಟ್‌ ಜೊತೆ ಸ್ಟ್ಯಾಂಪ್ ಮಾಡಿರುವ ವೀಸಾಗಳನ್ನು ಸ್ವೀಕರಿಸುವುದಿಲ್ಲ ಎಂದು ಟರ್ಕಿ ಹೇಳಲು ಬಯಸಿದೆಯೇ ಎಂಬ ಅಂಶ ಇದರಿಂದ ಸ್ಪಷ್ಟವಾಗುವುದಿಲ್ಲ.

*
ಈಗಿರುವ ವಲಸೆ ನೀತಿಯು ದೇಶದ ಹಿತ ಕಾಯುವುದಿಲ್ಲ. ಅರ್ಹತೆ ಆಧರಿತ ನೀತಿ ಅಗತ್ಯ. 
–ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.