ADVERTISEMENT

ಕಣ್ಣೋಟದಿಂದಲೇ ಕಡತ ರವಾನೆ...

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಲಂಡನ್‌ (ಪಿಟಿಐ): ಕಣ್ಣೋಟ­ದಿಂದಲೇ   ಕಂಪ್ಯೂಟರ್‌ ಪರದೆಯಿಂದ (ಸ್ಕ್ರೀನ್‌) ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ಗೆ  ಕಡತಗಳನ್ನು (ಫೈಲ್ಸ್‌) ರವಾನಿಸಲು ಅವಕಾಶ ಮಾಡಿಕೊಡುವ ಹೊಸ ತಂತ್ರಜ್ಞಾನ­ವನ್ನು ಬ್ರಿಟನ್‌ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

‘ಐಡ್ರಾಪ್‌’ ಹೆಸರಿನ ಈ ನೂತನ ತಂತ್ರಜ್ಞಾನ, ಕಂಪ್ಯೂಟರ್‌ ಬಳಕೆ­ದಾರರ ಕಣ್ಣುಗಳ ಚಲನವಲನಗಳನ್ನು  ಗುರುತಿಸಿ ಸಂಬಂಧಿಸಿದ ಕಡತ ಅಥವಾ ಚಿತ್ರವನ್ನು ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ಗೆ ಕಳುಹಿಸುತ್ತದೆ ಎಂದು ‘ನ್ಯೂ ಸೈಂಟಿಸ್ಟ್‌’ ವರದಿ ಮಾಡಿದೆ.

ಉದಾಹರಣೆಗೆ ಯಾವುದಾದರೂ ಕಡತ ಅಥವಾ ಛಾಯಾಚಿತ್ರವನ್ನು ಆಯ್ಕೆ ಮಾಡಿ ಗುಂಡಿ ಒತ್ತಿದರೆ ಸಾಕು ಅದು ಕಂಪ್ಯೂಟರ್‌ ಬಳಕೆದಾರರ ಸ್ಮಾರ್ಟ್‌­ಫೋನ್‌ಗೆ ತಲುಪುತ್ತದೆ.

‘ನಾವು ಯಾವ ಕಡತ ಅಥವಾ ಚಿತ್ರವನ್ನು ಪಡೆಯಲು ಬಯಸುತ್ತೇವೆ ಸಹಜವಾಗಿ ನಮ್ಮ ಕಣ್ಣುಗಳು ಆ ಕಡೆಗೆ ಹರಿಯುತ್ತವೆ. ಅದಕ್ಕೆ ಪೂರಕವಾಗಿ ನಮ್ಮ ತಂತ್ರಜ್ಞಾನ ಕಾರ್ಯ­ನಿರ್ವಹಿಸುತ್ತದೆ’ ಎಂದು ಇತರ ಸಹೋದ್ಯೋಗಿಗಳೊಂದಿಗೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಬ್ರಿಟನ್‌ನ ಲ್ಯಾಂಕ್‌ಸ್ಟರ್‌ ವಿಶ್ವವಿದ್ಯಾ­ಲಯದ ಜೇಸನ್‌ ಟರ್ನರ್‌ ತಿಳಿಸಿದ್ದಾರೆ.

ಬೆರಳಿಗೆ ಸಂದೇಶ
.ವಾಷಿಂಗ್ಟನ್‌ (ಪಿಟಿಐ):
ಮೊಬೈ­ಲ್‌ಗೆ ಕರೆ ಬಂದಿದ್ದು ತಿಳಿ­ಯದೆ ಎಷ್ಟೋ ಕರೆಯನ್ನು ಸ್ವೀಕ­ರಿಸಲು ಸಾಧ್ಯವಾ­ಗುವುದಿಲ್ಲ.  ಇನ್ನು ಮುಂದೆ ಈ ತೊಂದರೆ ಇಲ್ಲ.  ನಿಮ್ಮ ಕೈ ಬೆರಳಿಗೆ ಸಂದೇಶ­  ಕಳುಹಿ­ಸು­­ವಂತಹ ಹೊಸ ತಂತ್ರಜ್ಞಾ­ನವನ್ನು ಅಭಿವೃದ್ಧಿಪಡಿ­ಸಲಾಗಿದೆ.

ಕೈ ಬೆರಳಿ­ನಲ್ಲಿ ಬ್ಲೂಟೂತ್‌ ಉಂ­ಗುರ ಧರಿಸಿ­ದರೆ ನಿಮ್ಮ ಸ್ಮಾರ್ಟ್‌­ಫೋನ್‌ ನೇರ­ವಾಗಿ ನಿಮ್ಮ ಕೈ ಬೆರಳಿಗೇ ಸಂದೇಶ ಕಳಿಸುವಂತಹ ತಂತ್ರಜ್ಞಾನ ಇದರ­ಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಉಂಗುರದ ಬದಲಾಗಿ ಗಡಿ­ಯಾರ, ಟೈಮರ್‌ ಹಾಗೂ ಫೋನ್‌ ಫೈಂಡರ್‌ಗಳನ್ನೂ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT