ADVERTISEMENT

ಕಾಮನ್‌ವೆಲ್ತ್ ಕ್ರೀಡೆ ವಿವಾದ - ಸಚಿವ ಕೃಷ್ಣಗೆ ಮುಜುಗರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಮೆಲ್ಬರ್ನ್ (ಪಿಟಿಐ):  ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ತಮ್ಮ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಕೆವಿನ್ ರುಡ್ ಜೊತೆ ನಡೆಸಿದ ದ್ವಿಪಕ್ಷೀಯ ಮಾತುಕತೆ ವೇಳೆ ಕಾಮನ್‌ವೆಲ್ತ್ ಕ್ರೀಡಾಕೂಟದ  ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ತೀವ್ರ ಮುಜುಗರಕ್ಕೆ ಒಳಗಾಗುವ ಪ್ರಸಂಗ ಉಂಟಾಯಿತು.

ಕಾಮನ್‌ವೆಲ್ತ್ ಕ್ರೀಡೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಆಸ್ಟ್ರೇಲಿಯಾ ಕಂಪನಿಗಳಿಗೆ ಸಲ್ಲಿಸಲು ಬಾಕಿ ಇರುವ ಹಣದ ಕುರಿತು ಪ್ರಸ್ತಾಪವಾದಾಗ ಕೃಷ್ಣ ಅವರಿಗೆ ಇರುಸು ಮುರುಸು ಉಂಟಾಯಿತು.

ಭಾರತಕ್ಕೆ ಹಿಂತಿರುಗಿದೊಡನೆ ಕ್ರೀಡಾ ಸಚಿವಾಲಯದ ಜೊತೆ ಈ ಕುರಿತು ಮಾತುಕತೆ ನಡೆಸುವುದಾಗಿ ಕೃಷ್ಣ ಅವರು ಕೆವಿನ್ ಅವರಿಗೆ ಭರವಸೆ ನೀಡಿದರು.ತಮಗೆ ಸಂದಾಯವಾಗಬೇಕಾದ ಮಿಲಿಯಗಟ್ಟಲೆ ಡಾಲರ್ ಹಣದ ಕುರಿತಂತೆ ಆಸ್ಟ್ರೇಲಿಯಾದ ಕಂಪನಿಗಳು ಕಾಮನ್‌ವೆಲ್ತ್ ಕ್ರೀಡೆಗಳ ಆಯೋಜನಾ ಸಮಿತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಇಂಥ ಸಂಕೀರ್ಣ ವಿಷಯ ಕುರಿತು ಭಾರತ ಸ್ಪಂದಿಸಿದ ರೀತಿ ತಮಗೆ ತೃಪ್ತಿ ತಂದಿದೆ ಎಂದು ರುಡ್ ಇದೇ ವೇಳೆ ತಿಳಿಸಿದರು.

ಮೊಕದ್ದಮೆಗೆ ತಯಾರು: ಕಾಮನ್‌ವೆಲ್ತ್  ಕ್ರೀಡಾಕೂಟದ ವೇಳೆ ನಡೆದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾಗಿರುವ ಮಿಲಿಯಗಟ್ಟಲೆ ಡಾಲರ್ ಹಣವನ್ನು ಪಾವತಿ ಮಾಡದೇ ಇರುವುದರ ವಿರುದ್ಧ ಆಸ್ಟ್ರೇಲಿಯಾದ ಸಂಸ್ಥೆಗಳು ಆಯೋಜಕರ ವಿರುದ್ದ ಮೊಕದ್ದಮೆ ಹೂಡಲು ನಿರ್ಧರಿಸಿವೆ.

ಕಳೆದ ಅಕ್ಟೋಬರ್ 3ರಿಂದ 14ರವರೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಆರಂಭದ ಹಾಗೂ ಕೊನೆಯ ದಿನದ ಕಾರ್ಯಕ್ರಮಗಳ ಯಶಸ್ಸಿನ ರೂವಾರಿಯಾಗಿದ್ದ ರಿಕ್ ಬಿರ್ಚ್ ಅವರು ಮೊಕದ್ದಮೆಗೆ ತಯಾರು ನಡೆಸಿದ್ದು, ಇವರೊಂದಿಗೆ ಇತರ ಮೂರು ಸಂಸ್ಥೆಗಳು ಜೊತೆಗೂಡಲಿವೆ ಎಂದು ಆಸ್ಟ್ರೇಲಿಯಾದ ಪತ್ರಿಕೆಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.