ADVERTISEMENT

ಕಾಯಂ ಸದಸ್ಯತ್ವಕ್ಕೆ ಒತ್ತು - ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ವಿಶ್ವಸಂಸ್ಥೆ (ನ್ಯೂಯಾರ್ಕ್) (ಪಿಟಿಐ, ಐಎಎನ್‌ಎಸ್): 21ನೇ ಶತಮಾನದ ಶಕ್ತಿಯುತ ರಾಷ್ಟ್ರವೆಂದು ಬಿಂಬಿತವಾಗಿರುವ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಗುರುವಾರ ಇಲ್ಲಿಗೆ ಆಗಮಿಸಿದರು.

ಫ್ರಾಂಕ್‌ಫರ್ಟ್‌ನಿಂದ ಹೊರಟು ಇಲ್ಲಿಗೆ ಬಂದ ಉನ್ನತ ಮಟ್ಟದ ನಿಯೋಗದಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ,  ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಮತ್ತು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್  ಇದ್ದಾರೆ.

ಶನಿವಾರ ಮಹಾಧಿವೇಶನದಲ್ಲಿ ಮಾತನಾಡಲಿರುವ ಸಿಂಗ್, ವಿಶ್ವಸಂಸ್ಥೆ ಭದ್ರತಾ ಮಂಡಲಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕೆಂದು ಒತ್ತಾಯಿಸಲಿದ್ದಾರೆ.

ಜನವರಿಯಲ್ಲಿ ಭದ್ರತಾ ಮಂಡಲಿಯ ಕಾಯಂ ಸದಸ್ಯತ್ವ ಭಾರತಕ್ಕೆ ದೊರೆತ ನಂತರ ಜಾಗತಿಕ ಶಾಂತಿ ಸ್ಥಾಪನೆಗಾಗಿ ತಾನು ಮಾಡಿರುವ ಪ್ರಯತ್ನ ಹಾಗೂ ವಿಶ್ವಸಂಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಅವರು ಪ್ರಸ್ತಾಪಿಸಲಿದ್ದಾರೆ.

ಭಯೋತ್ಪಾದನೆ ದಮನ, ಆರ್ಥಿಕ ಹಿಂಜರಿತ, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿನ ಪ್ರಕ್ಷುಬ್ಧತೆ ಇತ್ಯಾದಿಗಳ ಕುರಿತು ಮಹಾಧಿವೇಶನದಲ್ಲಿ ಚರ್ಚೆ ನಡೆಯಲಿದೆ.

ಇರಾನ್, ದಕ್ಷಿಣ ಸೂಡಾನ್, ಶ್ರೀ ಲಂಕಾ ರಾಷ್ಟ್ರದ ಅಧ್ಯಕ್ಷರೊಂದಿಗೆ ಹಾಗೂ ಜಪಾನ್, ನೇಪಾಳದ ಪ್ರಧಾನಿಗಳ ಜತೆ ಈ ಸಂದರ್ಭದಲ್ಲಿ ಮನಮೋಹನ್ ಮಾತುಕತೆ ನಡೆಸುವರು. ಆದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮನಮೋಹನ್ ಯಾವುದೇ ಚರ್ಚೆ ನಡೆಸುವುದಿಲ್ಲ.

ವಿಶ್ವಸಂಸ್ಥೆಯನ್ನು ಪಕ್ಷಪಾತರಹಿತ, ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ವ್ಯವಸ್ಥೆ ಎಂದು ಭಾವಿಸುವ ಸ್ಥಿತಿ  ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ನಾನು ಒತ್ತು ನೀಡುತ್ತೇನೆ. ವಿಶೇಷವಾಗಿ ಭದ್ರತಾ ಮಂಡಲಿಯ ವಿಸ್ತರಣೆಯ ಬಗ್ಗೆ ಆದ್ಯತೆ ಮೇಲೆ ಪ್ರಸ್ತಾಪಿಸುತ್ತೇನೆ~ ಎಂದು ಐದು ದಿನಗಳ ಭೇಟಿಗೆ ಹೊರಡುವ ಮುನ್ನ ನವದೆಹಲಿಯಲ್ಲಿ ಸಿಂಗ್ ಹೇಳಿದ್ದರು.

ಜಾಗತಿಕ ಮಟ್ಟದಲ್ಲಿ ಕಂಡುಬರುತ್ತಿರುವ ಆರ್ಥಿಕ ಹಿಂಜರಿತ, ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಎದ್ದಿರುವ ದಂಗೆಗಳ ಬಗ್ಗೆ ಕೂಡ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.