ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರವು ತನ್ನ ದೇಶದ `ಕೊರಳಿನ ರಕ್ತನಾಳ'ವಿದ್ದಂತೆ ಎಂದು ಬಣ್ಣಿಸಿರುವ ಪಾಕಿಸ್ತಾನದ ಪ್ರಭಾವಿ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅವರು, ಸ್ಥಳೀಯ ಜನತೆಯ ಆಶಯದಂತೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೇಕು. ಆ ಪ್ರಾಂತ್ಯದಲ್ಲಿ ಶಾಶ್ವತ ಶಾಂತಿ ನೆಲೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಜಾರಿಗೊಳಿಸಬೇಕು ಎಂದಿದ್ದಾರೆ.
ರಾವಲ್ಪಿಂಡಿಯಲ್ಲಿರುವ ಸೇನೆಯ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಕಾಶ್ಮೀರವು ಅಂತರರಾಷ್ಟ್ರೀಯ ಮಟ್ಟದ ಸಮಸ್ಯೆಯಾಗಿ ಗುರ್ತಿಸಲ್ಪಡುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಷರೀಫ್ ಅವರು `ಕಾಶ್ಮೀರಿಗಳ ಅಪ್ರತಿಮ ಬಲಿದಾನಗಳು ವ್ಯರ್ಥವಾಗಲಾರವು. ಕಾಶ್ಮೀರ ಪ್ರಾಂತ್ಯದಲ್ಲಿ ಶಾಶ್ವತ ಶಾಂತಿ ನೆಲೆಸಲು ಸ್ಥಳೀಯರ ಆಶಯದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಜಾರಿಗೊಳಿಸಬೇಕು. ಇದು ಅನಿವಾರ್ಯ ಕೂಡ' ಎಂದರು.
`ಪಾಕಿಸ್ತಾನ ಸೇನೆಯು ಶಾಂತಿ ಪರವಾಗಿದೆ. ಆದರೆ, ಅಪ್ರಚೋದಿತ ಆಕ್ರಮಣಗಳಿಗೆ ಉತ್ತರಿಸಲು ಯಾವಾಗಲೂ ಸಿದ್ಧವಾಗಿರುತ್ತದೆ' ಎಂದು ಷರೀಫ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.